ಸಂಯುಕ್ತರಂಗ ಸ್ಥಾಪನೆಗೆ ಮಮತಾ ಒಲವು
ಬಿಜೆಪಿಯ ಆಂತರಿಕ ನಿರ್ಣಯಗಳಿಂದ ಬೇಸತ್ತಿರುವ ಎನ್ಡಿಎ ಅಂಗ ಪಕ್ಷವಾದ ಜೆಡಿಯು ಮತ್ತು ಪ್ರಾದೇಶಿಕ ಪಕ್ಷವಾದ ತೃಣಮೂಲ ಕಾಂಗ್ರೆಸ್...
ಕೋಲ್ಕತಾ/ಪಾಟ್ನಾ: ಬಿಜೆಪಿಯ ಆಂತರಿಕ ನಿರ್ಣಯಗಳಿಂದ ಬೇಸತ್ತಿರುವ ಎನ್ಡಿಎ ಅಂಗ ಪಕ್ಷವಾದ ಜೆಡಿಯು ಮತ್ತು ಪ್ರಾದೇಶಿಕ ಪಕ್ಷವಾದ ತೃಣಮೂಲ ಕಾಂಗ್ರೆಸ್ ಸಂಯುಕ್ತರಂಗ ಸ್ಥಾಪನೆಗೆ ಚಿಂತನೆ ನಡೆಸಿದ್ದು, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ಒಟ್ಟಾಗಿ ಸೆಣಸಲು ನಿರ್ಧರಿಸಿವೆ.
ಎನ್ಡಿಎ ಮೈತ್ರಿಕೂಟದಿಂದ ಹೊರ ಬರುವ ಕುರಿತು ಚಿಂತನೆ ನಡೆಸಿರುವ ಜೆಡಿಯು ಪಕ್ಷದ ಜೊತೆಗೂಡಿ ಸಂಯುಕ್ತರಂಗ ರಚನೆ ಮಾಡಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಲವು ತೋರಿದ್ದು, ಈ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಈಗಾಗಲೆ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚಿಸಲು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ತೀರ್ಮಾನಿಸಿದ್ದು, ನಾಳೆ ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ನಾಳಿನ ಸಭೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕೆ ಇಲ್ಲವೆ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಎಂಬ ಅಂಶಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನೇಮಿಸಿದ್ದು, ಹಾಗೂ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಮೋದಿ ಅವರನ್ನು ಬಿಂಬಿಸುತ್ತಿರುವ ಬಿಜೆಪಿಯ ನಡೆಯನ್ನು ವಿರೋಧಿಸಿದ್ದ ಜೆಡಿಯು, ಇದೀಗ ಮೈತ್ರಿಕೂಟದಿಂದ ಹೊರಬರಲು ತೀರ್ಮಾನಿಸಿದೆ.