ಅಥಣಿ ಗಚ್ಚಿನ ಮಠದ ಚನ್ನಬಸವ ಸ್ವಾಮೀಜಿ ವಿಧಿವಶ
ಬೆಳಗಾವಿ ಜಿಲ್ಲೆಯ ಅಥಣಿಯ ಗಚ್ಚಿನ ಮಠದ ಚನ್ನಬಸವ ಸ್ವಾಮೀಜಿ ಗುರುವಾರ ಬೆಳಗ್ಗೆ ವಿಧಿವಶ..
ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿಯ ಗಚ್ಚಿನ ಮಠದ ಚನ್ನಬಸವ ಸ್ವಾಮೀಜಿ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
67 ವರ್ಷದ ಚನ್ನಬಸವ ಸ್ವಾಮೀಜಿ ಅವರು ಇಂದು ಬೆಳಗ್ಗೆ ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಒಂದು ತಿಂಗಳ ಹಿಂದೆ ಮಠದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಚನ್ನಬಸವ ಸ್ವಾಮೀಜಿ ಅವರನ್ನು ಪೀಠದಿಂದ ಪದಚ್ಯುತಿಗೊಳಿಸಿ, ಮಠದಿಂದ ಹೊರಹಾಕಲಾಗಿತ್ತು ಈ ಘಟನೆಯಿಂದ ಬೇಸತ್ತ ಸ್ವಾಮೀಜಿಗಳು ತೀವ್ರ ನೊಂದಿದ್ದರು ಎನ್ನಲಾಗಿದೆ. ಈಗ ಚನ್ನಬಸವ ಸ್ವಾಮಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಚನ್ನಬಸವ ಸ್ವಾಮೀಜಿ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮಿಯನ್ನು ಭೇಟಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಕಳೆದ ಮೇ 16ರಂದು ಗಚ್ಚಿನ ಮಠದ ಆವರಣದಲ್ಲಿ ಭಾರಿ ಚರ್ಚೆಯಾಗಿತ್ತು. ಚನ್ನಬಸವ ಸ್ವಾಮಿ ನಿತ್ಯಾನಂದನಿಗೆ ಮಠವನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಮಠಕ್ಕೆ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ ಎಂದು ಭಕ್ತರು ಆರೋಪಿಸಿದ್ದರು. ಅಲ್ಲದೆ ಮಠದ ಪಾತ್ರೆ, ಆಹಾರ ಧಾನ್ಯ ಸೇರಿದಂತೆ ಇತರೆ ವಸ್ತುಗಳನ್ನು ಮಠದ ಆವರಣದಲ್ಲಿ ತಂದು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಹಲವು ಮಠಾಧೀಶರ ಸಂಧಾನದ ಬಳಿಕ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನೇಮಿಸಲಾಗಿತ್ತು.
ಸುಮಾರು 40 ವರ್ಷಗಳಿಂದ ಸ್ವಾಮೀಜಿ ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚಿಗೆ ಅವರನ್ನು ಮಠದಿಂದ ಹೊರ ಹಾಕಿದ್ದಕ್ಕೆ ಅವರು ಬೇಸರಗೊಂಡಿದ್ದರು. ಎದೆ ನೋವಿನಿಂದ ಬಳಲುತ್ತಿದ್ದ ಚೆನ್ನಬಸವ ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ಮಠದ ಭಕ್ತರಾದ ರಾಜೇಂದ್ರ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಚ್ಚಿನ ಮಠ ಸ್ವಾಮೀಜಿಯ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದ್ದು, 4 ಗಂಟೆಯವರೆಗೆ ಸ್ವಾಮೀಜಿಯ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.