ಇಂದು ಸಂಜೆ ಕೇಂದ್ರ ಸಂಪುಟ ಪುನಾರಚನೆ, ಖರ್ಗೆಗೆ ರೇಲ್ವೆ ಖಾತೆ?
ಇಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ರಾಜ್ಯದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ...
ನವದೆಹಲಿ: ಇಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ರಾಜ್ಯದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಮನಮೋಹನ್ ಸಿಂಗ್ ಸಂಪುಟಕ್ಕೆ ಹೊಸದಾಗಿ ಎಂಟು ಸಚಿವರು ಸೇರ್ಪಡೆಯಾಗಲಿದ್ದಾರೆ.
ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ರೇಲ್ವೆ ಖಾತೆ ನೀಡುವ ಸಾಧ್ಯತೆ ಇದೆ.
ಕ್ಯಾಬಿನೆಟ್ ಸಚಿವರಾಗಿ ಕರ್ನಾಟಕದ ಆಸ್ಕರ್ ಫರ್ನಾಂಡೀಸ್, ಆಂಧ್ರಪ್ರದೇಶದ ಕೆ.ಎಸ್.ರಾವ್, ರಾಜಸ್ಥಾನದ ಗಿರಿಜಾ ವ್ಯಾಸ್ ಮತ್ತು ರಾಜ್ಯ ಸಚಿವರಾಗಿ ಸಂತೋಷ್ ಚೌಧರಿ, ಮೀನಾಕ್ಷಿ ನಟರಾಜನ್, ಶೀಲಂ ನಚಿಯಪ್ಪ, ಮಾಣಿಕರಾವ್ ಗವಿತ್, ಹಾಗೂ ಬೀರೇಂದರ್ ಸಿಂಗ್ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದು ಕೊನೆಯ ಪುನಾರಚನೆ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಹಾಗಾಗಿ ಇಂದು ಸಂಜೆ ನಡೆಯುವ ಪುನಾರಚನೆಯು ಯುಪಿಎ-2ರ ಕೊನೇ ಸಂಪುಟ ಪುನಾರಚನೆ ಎಂದೇ ಹೇಳಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ನಾಯಕ ಅಹ್ಮದ್ ಪಟೇಲ್ ಅವರು ಪುನಾರಚನೆಗೆ ಸಂಬಂಧಿಸಿ ಸಮಾಲೋಚನೆ ನಡೆಸಿದ್ದಾರೆ.