ರಾಜ್ಯಸಭಾ ಸದಸ್ಯರಾಗಿ ಪ್ರಧಾನಿ ಪ್ರಮಾಣ
ಅಸ್ಸಾಂನಿಂದ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಧಾನಮಂತ್ರಿ ಮನಮೋಹನ್..
ನವದೆಹಲಿ: ಅಸ್ಸಾಂನಿಂದ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸಭೆಯ ಸಭಾನಾಯಕರಾಗಿರುವ 80 ವರ್ಷದ ಪ್ರಧಾನಿ ಸಿಂಗ್ ಅವರು ಇತ್ತೀಚಿಗಷ್ಟೆ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇಂದು ಸಿಂಗ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ನಾಯಕರಾದ ಅಹ್ಮದ್ ಪಟೇಲ್, ಮೊತಿಲಾಲ್ ವೊಹ್ರಾ, ರಾಜೀವ್ ಶುಕ್ಲಾ ಮತ್ತು ಲೋಕ ಜನ ಶಕ್ತಿ ಪಕ್ಷದ ಅಧ್ಯಕ್ಷ ರಾಮ್ವಿಲಾಸ್ ಪಾಸ್ವಾನ್, ಎಸ್ಪಿ ನಾಯಕ ರಾಮ್ಗೋಪಾಲ್ ಯಾದವ್ ಅವರು ಭಾಗವಹಿಸಿದ್ದರು.
ಪ್ರಮಾಣವಚನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಮತ್ತೆ ಅಸ್ಸಾಂ ಜನತೆಯ ಸೇವೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ ಎಂದರು.
ಇದೇ ವೇಳೆ ಅಸ್ಸಾಂನಿಂದ ಆಯ್ಕೆಯಾಗಿದ್ದ ಇನ್ನೊರ್ವ ಕಾಂಗ್ರೆಸ್ ಸದಸ್ಯ ಸ್ಯಾಂಟಿಯಸ್ ಕುಜುರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು. ಈ ಎರಡು ಸ್ಥಾನಗಳಿಗೆ ಕಳೆದ ಮೇ 30ರಂದು ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.