ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ: ರಾಜನಾಥ್ ಸಿಂಗ್
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, 'ಪಕ್ಷದಲ್ಲಿ ಎಲ್ಲವೂ ಸರಿ ಇದೆ' ಎಂದು ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ..
ಮುಂಬೈ: ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, 'ಪಕ್ಷದಲ್ಲಿ ಎಲ್ಲವೂ ಸರಿ ಇದೆ' ಎಂದು ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಉದ್ಭವಿಸಿದ ಪಕ್ಷದಲ್ಲಿನ ಎಲ್ಲ ಗೊಂದಲಗಳಿಗೂ ತರೆ ಎಳೆಯು ಯತ್ನ ಮಾಡಿದ್ದಾರೆ.
ಆಂಗ್ಲ ದಿನ ಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ನಡುವಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲವೂ ಸರಿ ಇದೆ ಎಂದು ಹೇಳಿದರು.
ಇದೇ ವೇಳೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ತಳ್ಳಿಹಾಕದ ರಾಜನಾಥ್ ಸಿಂಗ್, 'ಜನರ ನಾಡಿ ಮಿಡಿತ'ವನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ ಎಂದರು.
ಗೋವಾದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದಕ್ಕೆ ಆಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜಿನಾಮೆ ನೀಡುವ ಮೂಲಕ ಬಹಿರಂಗವಾಗಿಯೇ ಮೋದಿ ಆಯ್ಕೆಯನ್ನು ವಿರೋಧಿಸಿದ್ದರು. ನಂತರ ಆರ್‌ಎಸ್‌ಎಸ್ ಹಾಗೂ ಪಕ್ಷದ ನಾಯಕರ ಮನವೊಲಿಕೆ ಯತ್ನದಿಂದ ರಾಜಿನಾಮೆ ಹಿಂಪಡೆದಿದ್ದರು.