ಗುಜರಾತ್: ಮೋದಿ ನಂತರ ಯಾರು?
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಗುಜರಾತ್...
ಅಹಮದಾಬಾದ್: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ತಮ್ಮ ನೇತೃತ್ವದಲ್ಲೇ 2014ರ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದೆಯಾದರೆ ಮೋದಿ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಮೋದಿ ನಂತರ ಗುಜರಾತ್‌ನಲ್ಲಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ವಿಷಯದ ಬಗ್ಗೆ ಈಗ ಚರ್ಚೆಗಳು ಶುರುವಾಗಿವೆ.
ಈಗಾಗಲೇ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಆನಂದಿಬೆನ್ ಪಟೇಲ್, ನಿತೀನ್ ಪಟೇಲ್, ಸೌರಭ ಪಟೇಲ್ ಮತ್ತು ರ್ಯಾಂಚೊದಾಸ್ ಅವರ ಹೆಸರುಗಳು ಕೇಳಿ ಬರುತ್ತಿರುವುದರಿಂದ ಈ ನಾಲ್ವರಲ್ಲಿ ಯಾರಾದರು ಒಬ್ಬರು ಗುಜರಾತ್‌ನ ಮುಂದಿನ ಸಿಎಂ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಮೋದಿ ಕುಟುಂಬಕ್ಕೆ ಹೆಚ್ಚು ಹತ್ತಿರವಾಗಿರುವ ನಗರಾಭಿವೃದ್ದಿ ಮತ್ತು ವಸತಿ ಖಾತೆ ಸಚಿವರಾಗಿರುವ 72 ವರ್ಷದ ಹಿರಿಯ ರಾಜಕಾರಣಿ ಆನಂದಿಬೆನ್ ಅವರ ಹೆಸರು ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ರಾಜ್ಯ ಹಣಕಾಸು ಮತ್ತು ಆರೋಗ್ಯ ಸಚಿವರಾಗಿರುವ ನಿತೀನ್ ಪಟೇಲ್ ಅವರು ಇದ್ದು, ಮೋದಿ ಚುನಾವಣೆ ಸಮಿತಿಯ ಅಧ್ಯಕ್ಷರಾದ ನಂತರ ವಿಧಾನಸಭೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ನಿತೀನ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಗುಜರಾತ್‌ನ ಸಿಎಂ ಗಾದಿಗೆ ಕೇಳಿಬರುತ್ತಿರುವ ಮತ್ತೊಂದು ಹೆಸರು ಸದ್ಯ ಇಂಧನ ಸಚಿವರಾಗಿರುವ ಸೌರಭ ಪಟೇಲ್. ವಿದೇಶದಲ್ಲಿ ಎಂಬಿಎ ವ್ಯಾಸಂಗ ಮಾಡಿರುವ ಸೌರಭ ಅವರು ಉತ್ತಮ ಆಡಳಿತ ನೀಡಲು ಸಬಲರಾಗಿದ್ದಾರೆ. ಸೌರಭ ಅವರು ದಿವಾಂಗತ ದೀರುಬಾಯಿ ಅಂಬಾನಿ ಅವರ ಸಹೋದರನಾಗಿದ್ದು, ಕೈಗಾರಿಕೋಧ್ಯಮಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಮೋದಿ ನಂತರ ಉತ್ತಮ ಅಧಿಕಾರ ನೀಡುವ ಕೌಶಲ್ಯ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಂಚೊದಾಸ್ ಅವರು ಸಹ ಸಿಎಂ ರೇಸ್‌ನಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿರುವುದ ರಿಂದ ರಾಂಚೋದಾಸ್ ಅವರಿಗು ಸಿಎಂ ಸ್ಥಾನ ಸಿಗುವ ಸಾಧ್ಯತೆಗಳಿವೆ. ಈ ನಾಲ್ವರು ತಮ್ಮದೆ ಆದ ವರ್ಚಸನ್ನು ಹೊಂದಿರುವುದರಿಂದ ಗುಜರಾತ್‌ನ ಸಿಎಂ ಯಾರಾಗುತ್ತಾರೆ ಎಂಬುದು ಕಾದು ನೋಡಬೇಕು.