ಮೋಹನ್ ಭಾಗವತ್ ಭೇಟಿ ಮಾಡಿದ ಆಡ್ವಾಣಿ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಗುರುವಾರ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಂಘದ...
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಗುರುವಾರ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಂಘದ ಕಚೇರಿಯಲ್ಲಿ ಭೇಟಿ ಮಾಡಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಸೇರಿದಂತೆ ಇತ್ತೀಚಿನ ಹಲವು ಬೆಳವಣಿಗೆಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಮೋದಿಗೆ ನೇತೃತ್ವ ವಹಿಸಿರುವ ಬಗ್ಗೆ ಮತ್ತು ಎನ್ಡಿಎ ಮೈತ್ರಿಕೂಟದಿಂದ ಹಿಂದೆ ಸರಿದ ಜೆಡಿಯು ನಿರ್ಧಾರ ಹಾಗೂ ಪ್ರಸ್ತುತ ಪಕ್ಷದಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಪಕ್ಷದಲ್ಲಿ ನಡೆದ ಇತ್ತೀಚಿನ ಬದಲಾವಣೆಗಳ ಕುರಿತು ಮತ್ತು ಮುಂದೆ ಪಕ್ಷ ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅಲ್ಲದೆ ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕೆಲ ನಾಯಕರು ಕಾರಣ ಕರ್ತರಾಗಿದ್ದು, ಅವರು ತಮ್ಮ ವೈಯಕ್ತಿಯ ಏಳಿಗೆಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಕೇವಲ ತಮ್ಮ ಹಿತಾಸಕ್ತಿಗಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳಾಗಿದ್ದು, ಇದರಿಂದ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಆಡ್ವಾಣಿ ವಿವರಿಸಿದರು ಎನ್ನಲಾಗಿದೆ.
ತಮ್ಮ ವಿರೋಧದ ನಡುವೆಯು ಮೋದಿ ಅವರಿಗೆ ಚುನಾವಣಾ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಬೇಸರಗೊಂಡು ಪಕ್ಷದ ಎಲ್ಲಾ ಸ್ಥಾನಗಳಿಗೆ ಆಡ್ವಾಣಿ ರಾಜಿನಾಮೆ ನೀಡಿದ್ದರು. ನಂತರ ಆರ್ಎಸ್ಎಸ್ ಮುಖ್ಯಸ್ಥರ ಸಂಧಾನದೊಂದಿಗೆ ಆಡ್ವಾಣಿ ಅವರು ರಾಜಿನಾಮೆ ಹಿಂಪಡೆದಿದ್ದರು.