ಪ್ರಧಾನಿ ಹುದ್ದೆಗೆ ಸುಷ್ಮಾ ಸ್ವರಾಜ್ರನ್ನು ಪರಿಗಣಿಸಿ: ಜೆಡಿಯು
ಕಾಂಗ್ರೆಸ್ನ್ನು ಸೋಲಿಸಲು ಬಿಜೆಪಿ ಇತರೆ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಬಿಜೆಪಿ..
ನವದೆಹಲಿ: ಕಾಂಗ್ರೆಸ್ನ್ನು ಸೋಲಿಸಲು ಬಿಜೆಪಿ ಇತರೆ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ ಬೆನ್ನಲ್ಲೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಹುದ್ದೆಗೆ ಮೊದಲು ಪರಿಗಣಿಸಬೇಕು ಎಂದು ಜೆಡಿಯು ಶನಿವಾರ ಹೇಳಿದೆ.
ಬಿಜೆಪಿಯೊಂದಿಗಿನ 17 ವರ್ಷಗಳ ಮೈತ್ರಿ ಕಡಿದುಕೊಂಡ ನಂತರವೂ ಲೋಕಸಭೆ ಪ್ರತಿಪಕ್ಷದ ನಾಯಕಿಯ ಬೆಂಬಲಕ್ಕೆ ನಿಂತಿರುವ ಜೆಡಿಯು, ಸುಷ್ಮಾ ಅವರು ಚೆನ್ನಾಗಿ ಮಾತನಾಡುತ್ತಾರೆ ಮತ್ತು ಅವರು ಯಾವುದೇ ವಿವಾದಕ್ಕೆ ಸಿಲುಕಿಕೊಂಡಿಲ್ಲ. ಹೀಗಾಗಿ ಅವರನ್ನು ಮೊದಲು ಪ್ರಧಾನಿ ಹುದ್ದೆಗೆ ಪರಿಗಣಿಸಬೇಕು ಎಂದು ಜೆಡಿಯು ನಾಯಕ ಅಲಿ ಅನ್ವರ್ ಅವರು ಹೇಳಿದ್ದಾರೆ.
ಇದೇ ವೇಳೆ ಆಡ್ವಾಣಿ ಬಗ್ಗೆಯೂ ಮಾತನಾಡಿದ ಅನ್ವರ್, ಆಡ್ವಾಣಿ ಅವರು ಇನ್ನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿಲ್ಲ. ಅವರು ಪಕ್ಷದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ ಮತ್ತು ಬಿಜೆಪಿ ಏಕಾಂಗಿಯಾಗಿ ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳುವುದರಲ್ಲಿ ಅರ್ಥವಿದೆ. ಇದು ಸಮ್ಮಿಶ್ರ ಯುಗ. ಯಾವುದೇ ಪಕ್ಷ ಏಕಾಂಗಿಯಾಗಿ ಗೆದ್ದು ಅಧಿಕಾರ ಹಿಡಿಯುವುದು ಕಷ್ಟ ಎಂದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಚುನಾವಣೆ ನೇತೃತ್ವ ವಹಿಸುತ್ತಿದ್ದಂತೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಆಡ್ವಾಣಿ ಅವರು ರಾಜಿನಾಮೆ ಹಿಂಪಡೆದ ಮಾತ್ರಕ್ಕೆ ಪಕ್ಷದಲ್ಲಿ ಅಸಮಾಧಾನ ಶಮನವಾಗಿಲ್ಲ ಎಂದು ಅನ್ವರ್ ಹೇಳಿದರು.
ನಿನ್ನೆ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆಡ್ವಾಣಿ, ಕಾಂಗ್ರೆಸ್ನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳಲ್ಲೇ ಒಂದಾಗಬೇಕು ಎಂದಿದ್ದರು.