ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ತಪ್ಪಿತಸ್ಥರ ವಿರುದ್ಧ ಕ್ರಮ; ಸಿಎಂ
ಶೈಕ್ಷಣಿಕ ನಗರ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ..
ಬೆಂಗಳೂರು: ಶೈಕ್ಷಣಿಕ ನಗರ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಣಿಪಾಲ ವಿವಿಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭರವಸೆ ನೀಡಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಈ ಸಂಬಂಧ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ನಾಳೆ ಮಣಿಪಾಲ್‌ಗೆ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಇನ್ನು ವಿದ್ಯಾರ್ಥಿನಿ ಮೇಲಿನಿ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಉಡುಪಿ ಹಾಗೂ ಮಣಿಪಾಲದಲ್ಲಿ ವಿದ್ಯಾರ್ಥಿ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿವೆ.
ಮಣಿಪಾಲ ವಿವಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಕೇರಳದ ವಿದ್ಯಾರ್ಥಿನಿ(22) ಮೇಲೆ ಆಟೋ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ. ಯುವತಿ ತೀವ್ರ ಮಾನಸಿಕ ಮತ್ತು ದೈಹಿಕ ಅಘಾತಕ್ಕೊಳಗಾಗಿದ್ದು, ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈಕೆ ಕಾಲೇಜ್ ಗ್ರಂಥಾಲಯದಲ್ಲಿ ಎಂದಿನಂತೆ ಓದು ಮುಗಿಸಿ ಗುರುವಾರ ರಾತ್ರಿ 11.30ಕ್ಕೆ ವಿವಿಯ ಹಿಂಬದಿಯಲ್ಲಿರುವ ಮಾಂಡೋವಿ ಪ್ಲಾಜಾ ಎಂಬ ವಸತಿಗೃಹಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಸುಮಾರು 12 ಗಂಟೆ ಹೊತ್ತಿಗೆ ಅದೇ ರಸ್ತೆಗೇ ಆಕೆಯನ್ನು ತಂದು ಬಿಟ್ಟು ಹೋಗಿದ್ದಾರೆ. ಅಲ್ಲಿಂದ ಆಕೆ ವಸತಿಗೃಹಕ್ಕೆ ಹೋಗಿ ಅಲ್ಲಿನ ರಾತ್ರಿ ಕಾವಲುಗಾರನಿಗೆ ವಿಷಯ ತಿಳಿಸಿದ್ದಾಳೆ. ನಂತರ ಆಕೆಯನ್ನು ಸ್ಥಳೀಯ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ಯಾಚಾರದ ವೇಳೆ ಆಕೆ ಪ್ರತಿಭಟಿಸಿದ್ದರಿಂದ ಆಕೆಯ ಕಾಲಿನ ಮೂಳೆ ಮುರಿದಿದ್ದು, ಶುಕ್ರವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಆಕೆಗೆ ನೀಡಲಾಗಿದ್ದ ಅರವಳಿಕೆ ಪ್ರಭಾವದಿಂದ ತಕ್ಷಣಕ್ಕೆ ಪೊಲೀಸರಿಗೆ ಆಕೆಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಾಗಿಲ್ಲ.