ಗುಂಡಿನ ದಾಳಿ: 9 ವಿದೇಶಿಯರ ಹತ್ಯೆ
ಪಾಕಿಸ್ತಾನದ ಉತ್ತರ ಭಾಗದ ನಾಗಾ ಪರ್ಬತ್ ಬೇಸ್ಕ್ಯಾಂಪ್ ಬಳಿ ಭಾನುವಾರ ಮುಂಜಾನೆ ಆಗಂತುಕ ಬಂದೂಕುಧಾರಿಯ ಗುಂಡಿನ ದಾಳಿಗೆ...
ಇಸ್ಲಾಮಾಬಾದ್: ಪಾಕಿಸ್ತಾನದ ಉತ್ತರ ಭಾಗದ ನಾಗಾ ಪರ್ಬತ್ ಬೇಸ್ಕ್ಯಾಂಪ್ ಬಳಿ ಭಾನುವಾರ ಮುಂಜಾನೆ ಪೊಲೀಸ್ ಸಮವಸ್ತ್ರ ಧರಿಸಿದ್ದ ಬಂದೂಕುಧಾರಿಯೊಬ್ಬ ವಿದೇಶಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 9 ವಿದೇಶಿಗರನ್ನು ಹತ್ಯೆ ಮಾಡಿದ್ದಾನೆ.
ಪಾಕಿಸ್ತಾನದ ಉತ್ತರ ಭಾಗದ ನಾಗಾ ಪರ್ಬತ್ ಬೇಸ್ಕ್ಯಾಂಪ್ ಬಳಿ ಇರುವ ಅತಿ ಎತ್ತರದ ಪರ್ವತ ಪ್ರದೇಶಕ್ಕೆ ಇಂದು ಮುಂಜಾನೆ ಪ್ರವಾಸಿಗರ ತಂಡ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಬಂದೂಕುಧಾರಿ ವಿದೇಶಿಗರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಉಕ್ರೇನ್ನ ಐದು ಪ್ರವಾಸಿಗರು, ಚೀನಾದ ಮೂವರು ಹಾಗೂ ಒಬ್ಬ ರಷ್ಯಾನ್ ಸೇರಿದಂತೆ ಒಟ್ಟು 9 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಪಾಕಿಸ್ತಾನ ಗೃಹ ಸಚಿವ ಚೌದರಿ ನಿಸಾರ್ ಆಲಿ ಖಾನ್ ಅವರು ಹೇಳಿದ್ದಾರೆ.
ನಾಗಾ ಬೇಸ್ಕ್ಯಾಂಪ್ ಬಳಿ ದಾಳಿ ನಡೆದಿರುವುದಾಗಿ 1 ಗಂಟೆಯ ಸಮಯದಲ್ಲಿ ಸ್ಥಳೀಯ ಗೈಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ದಾಳಿಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ದಾಳಿ ನಡೆಸಿರುವುದಾಗಿ ಯಾವುದೇ ಭಯೋತ್ಪಾದನೆ ಸಂಘಟನೆ ಮುಂದೆ ಬಂದಿಲ್ಲ ಹೀಗಾಗಿ ಸದ್ಯ ದಾಳಿಯ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಬರ್ಕಾತ್ ಆಲಿ ಅವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಸುನ್ನಿ ಹಾಗೂ ಶಿಯಾ ಮುಸ್ಲಿಮರ ನಡುವೆ ಕೋಮುಗಲಭೆಗಳು ನಡೆಯುತ್ತಿದ್ದವು, ಆದರೆ ಅಂತಹ ಹೇಳಿಕೊಳ್ಳುವಂತ ದಾಳಿಗಳು ನಡೆದಿರಲಿಲ್ಲ ಎಂದು ಆಲಿ ಹೇಳಿದ್ದಾರೆ.
ಹಿಮಾಲಯ ಮತ್ತು ಕರಾಕೋರಂ ವ್ಯಾಪ್ತಿಯ ಅತ್ಯಂತ ಎತ್ತರದ ಪರ್ವತಗಳಲ್ಲಿ ಇದು ಒಂದಾಗಿದ್ದು, ಇಲ್ಲಿನ ರಮನೀಯ ದೃಶ್ಯವನ್ನು ಕಾಣಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಾರೆ. ಈ ದಾಳಿಯಿಂದಾಗಿ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ.