ಉದ್ಯಮಿ, ಬಿಜೆಪಿ ಮುಖಂಡ ಮುಂಜುನಾಥ್ ಹತ್ಯೆ
ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಮಂಜುನಾಥ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಮಂಜುನಾಥ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾರಾಯಣಪುರ ಕೆರೆ ಬಳಿ ಅರೆಬಂದ ಸ್ಥಿತಿಯಲ್ಲಿ ಮಂಜುನಾಥ್ ಶವ ಮಂಗಳವಾರ ಪತ್ತೆಯಾಗಿದೆ.
ಕೊಲೆಯಾದ ಮಂಜುನಾಥ್(42) ಬೆಂಗಳೂರಿನ ಮಹದೇವಪುರ ನಿವಾಸಿಯಾಗಿದ್ದು, ನಿನ್ನೆ ನಾಪತ್ತೆಯಾಗಿದ್ದರು. ಇಂದು ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಶವವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮಂಜುನಾಥ್ ಅವರನ್ನು ಅಪಹರಿಸಿ ಕೋಲಾರಕ್ಕೆ ಕರೆತಂದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಸಿದ್ದಾರೆ.
ಇನ್ನು ಕಾಡುಗೋಡಿ ಬಳಿ ಇನ್ನೋವಾ ಕಾರೊಂದು ಪತ್ತೆಯಾಗಿದ್ದು, ಆ ಕಾರಿನ ವಿವರ ಸಂಗ್ರಹಿಸಿದ ಪೊಲೀಸರು, ಇದು ಮಂಜುನಾಥ್ ಅವರಿಗೆ ಸೇರಿದ್ದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಾರಿನಲ್ಲೇ ಮಚ್ಚು, ಲಾಂಗ್ಗಳು ಸಹ ಪತ್ತೆಯಾಗಿರುವುದರಿಂದ, ದುಷ್ಕರ್ಮಿಗಳು ಉದ್ಯಮಿಯನ್ನು ಕೊಲೆ ಮಾಡಿ ನಂತರ ಶವವನ್ನು ಸುಟ್ಟು ಹಾಕಿದ್ದಾರೆ.
ಈ ಸಂಬಂಧ ಬಂಗಾರಪೇಟೆ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.