ಗುಜರಾತಿಗಳನ್ನೇ ರಕ್ಷಿಸಿದ್ದು ಏಕೆ? ಮೋದಿಗೆ ಶಿವಸೇನೆ ಪ್ರಶ್ನೆ
ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸುಮಾರು 15 ಸಾವಿರ ಗುಜರಾತಿಗಳನ್ನು ರಕ್ಷಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ...
ಮುಂಬೈ: ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸುಮಾರು 15 ಸಾವಿರ ಗುಜರಾತಿಗಳನ್ನು ರಕ್ಷಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿರುವ ಶಿವಸೇನೆ, ಬರೀ ಗುಜರಾತಿಗಳನ್ನೇ ರಕ್ಷಿಸಿದ್ದು ಏಕೆ ಎಂದು ಕೇಳಿದೆ.
ಮೋದಿ ಅವರ ಹೇಳಿಕೆ ಇದೀಗ ವ್ಯಾಪಕ ಟೀಕೆಗಳಿಗೆ ಕಾರಣವಾಗಿದ್ದು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹಾಗೂ ತಮ್ಮ ರಾಜಕೀಯ ವರ್ಚಸ್ಸು ವೃದ್ಧಿಗಾಗಿ ಮೋದಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಪ್ರವಾಹಕ್ಕೆ ದೇಶದ ಇತರ ರಾಜ್ಯಗಳ ಸಾವಿರಾರು ಸಂತ್ರಸ್ತರು ಸಿಲುಕಿರುವಾಗ ಮೋದಿ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಶಿವಸೇನೆ ತನ್ನ ಸಾಮ್ನಾದಲ್ಲಿ ಟೀಕಿಸಿದೆ.
ಮೋದಿ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ ಬೆನ್ನಲ್ಲೆ ಇದೀಗ ಎನ್‌ಡಿಎ ಮೈತ್ರಿಕೂಟದ ಮತ್ತೊಂದು ಪಕ್ಷ ಶಿವಸೇನೆ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಜಲಪ್ರಳಯದಲ್ಲಿ 15 ಸಾವಿರ ಗುಜರಾತಿಗರನ್ನು ರಕ್ಷಿಸಲಾಗಿರುವುದಾಗಿ ಮೋದಿ ಹೇಳಿರುವುದು ಎಷ್ಟು ಸರಿ, ಆ ಬಗ್ಗೆ ಮೋದಿ ಅವರೆ ಖುದ್ದು ಲೆಕ್ಕ ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬೆಟ್ಟ ಗುಡ್ಡಗಳಲ್ಲಿ ಸಿಲುಕಿರುವ ಸಂತ್ರಸ್ತರನ್ನು ತಲುಪಲು ಭಾರತೀಯ ರಕ್ಷಣಾ ಪಡೆಗೆ ಕಷ್ಟವಾಗಿರುವುವಾಗ ಇಂತಹ ಸಂದರ್ಭದಲ್ಲಿ 15 ಸಾವಿರ ಗುಜರಾತಿಗರನ್ನು ಕಾಪಾಡಲು ಮೋದಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಈ ಮೂಲಕ ಜೆಡಿಯು ನಂತರ ಈಗ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಸಹ ಮೋದಿ ಅವರ ಅಸ್ತಿತ್ವವನ್ನು ಪ್ರಶ್ನಿಸಿದಂತಾಗಿದೆ.
ಉತ್ತರಾಖಂಡದ ಪ್ರವಾಹವನ್ನು ಮೋದಿ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡಬಾರದು ಎಂದು ಮೋದಿ ಹೇಳಿಕೆಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿತ್ತು.