ನಟಿ ಉಮಾ ಶಿವಕುಮಾರ್ ವಿಧಿವಶ
ಬೆಂಗಳೂರು: ಕನ್ನಡದಲ್ಲಿ ಗಯ್ಯಾಳಿ ಪಾತ್ರಗಳಿಗೆ ಹೆಸರಾಗಿದ್ದ ಬಡ್ಡಿ ಬಂಗಾರಮ್ಮ ಖ್ಯಾತಿಯ ನಟಿ ಉಮಾ ಶಿವಕುಮಾರ್ ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಕುಮಾರಪಾರ್ಕ್ನ ಬಿಡಿಎ ಬಳಿಯ ಈಶ್ವರ ಕೃಪ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಉಮಾ ಶಿವಕುಮಾರ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ಅನಾರೋಗ್ಯಕ್ಕೆ ತುತ್ತಾಗಿದ್ದ ಉಮಾ ಶಿವಕುಮಾರ್ ಅವರನ್ನು ಕನ್ನಿಂಗ್ಹ್ಯಾಮ್ನ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ದೃಢಪಡಿಸಿವೆ.
ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ಹೆಚ್ಚಾಗಿ ಸೊಸೆಯರನ್ನು ಕಾಡುವ ಅತ್ತೆಯಾಗಿ, ಮಕ್ಕಳನ್ನು ಹದ್ದು ಬಸ್ತಿನಲ್ಲಿಡುವ ತಾಯಿಯಾಗಿ ಗಯ್ಯಾಳಿ ಪಾತ್ರಗಳನ್ನೆ ಮಾಡುತ್ತಾ ಬಂದಿದ್ದರು. ಡಾ. ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಪ್ರಬುದ್ಧ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದ ಗಣ್ಯರಿಂದ ಸಂತಾಪ
ಬಡ್ಡಿ ಬಂಗಾರಮ್ಮ ಖ್ಯಾತಿಯ ನಟಿ ಉಮಾ ಶಿವಕುಮಾರ್ ನಿಧನಕ್ಕೆ ಚಿತ್ರ ತಾರೆಯರು ಸಂತಾಪ ಸೂಚಿಸಿದ್ದಾರೆ. ಪರಿಷತ್ ಸದಸ್ಯರಾದ ತಾರ, ಸಚಿವೆ ಉಮಾಶ್ರೀ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.