ಗುಜರಾತಿಗಳನ್ನು ರಕ್ಷಿಸಿದ್ದೇವೆ ಎಂದು ಮೋದಿ ಹೇಳಿಲ್ಲ: ಬಿಜೆಪಿ
ಉತ್ತರಾಖಂಡನ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 15 ಸಾವಿರ ಗುಜರಾತಿಗಳನ್ನು ನಾವು ರಕ್ಷಿಸಿದ್ದೇವೆ...
ಲಖನೌ: ಉತ್ತರಾಖಂಡನ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 15 ಸಾವಿರ ಗುಜರಾತಿಗಳನ್ನು ನಾವು ರಕ್ಷಿಸಿದ್ದೇವೆ ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಡವಿನ ವಾಕ್ಸಮರ ಮುಂದುವರೆದಿದ್ದು, ಮೋದಿ ಅವರು ಯಾವತ್ತು ಅಂತಹ ಹೇಳಿಕೆ ನೀಡಿಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ಮೋದಿ ಅವರು ತಮ್ಮ ಕಳಕಳಿಯನ್ನು ತೋರಿಸಲು ಉತ್ತರಾಖಂಡಗೆ ತೆರಳಿದ್ದರು. ಆದರೆ ಅದನ್ನು ತಪ್ಪಾಗಿ ಅರ್ಥೈಯಿಸಲಾಗಿದೆ. ಈ ಸಂಬಂಧ ನಾನು ಮೋದಿ ಅವರೊಂದಿಗೂ ಮಾತನಾಡಿದ್ದು, ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
'ಆ ರೀತಿಯಾಗಿ ಮೋದಿ ಅವರ ಹೇಳಿಕೆಯನ್ನು ಪ್ರಕಟಿಸಿರುವುದರ ಹಿಂದೆ ಯಾವ ಉದ್ದೇಶ ಇದೆ ಗೊತ್ತಿಲ್ಲ. ಆದರೆ ಉತ್ತರಾಖಂಡನ ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜಕೀಯವಾಗಿ ಯಾವುದೇ ಹೇಳಿಕೆ ನೀಡಬೇಡಿ' ಎಂದು ಪಕ್ಷದ ಕಾರ್ಯಕರ್ತರಿಗೆ ತಾವು ಸೂಚಿಸಿರುವುದಾಗಿ ಸಿಂಗ್ ತಿಳಿಸಿದರು.
ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿತ್ತು. ಇನ್ನು ಎನ್ಡಿಎ ಮೈತ್ರಿ ಪಕ್ಷವಾದ ಶಿವಸೇನೆ ಸಹ ತನ್ನ ಮುಖವಾಣಿ ಸಾಮ್ನಾದಲ್ಲಿ ಗುಜರಾತ್ ಸಿಎಂ ಮೋದಿಯನ್ನು ಟೀಕಿಸಿದ್ದು, ಕೇವಲ ಗುಜರಾತಿಗಳ ರಕ್ಷಣೆ ಮಾಡಿಕೊಂಡು ಬಂದಿರುವುದು ಸರಿಯಲ್ಲ ಎಂದಿದೆ. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದು, ಇಡೀ ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಆದರೆ ಕೇವಲ 15 ಸಾವಿರ ಗುಜರಾತಿಗಳನ್ನು ರಕ್ಷಣೆ ಮಾಡಿಕೊಂಡು ಬಂದಿರುವುದು ತಪ್ಪು ಎಂದು ಹೇಳಿತ್ತು.