ಉದ್ಧವ್ ಠಾಕ್ರೆ ಭೇಟಿ ಮಾಡಿದ ಮೋದಿ
2014ರ ಲೋಕಸಭಾ ಚುನಾವಣಾ ಪ್ರಚಾರ ಉಸ್ತುವಾರಿ ವಹಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ಮುಂಬೈನ...
ಮುಂಬೈ: 2014ರ ಲೋಕಸಭಾ ಚುನಾವಣಾ ಪ್ರಚಾರ ಉಸ್ತುವಾರಿ ವಹಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಮೋದಿ ಮುಂಬೈಗೆ ಭೇಟಿ ನೀಡಿದ್ದು, ಚುನಾವಣಾ ಪ್ರಚಾರ ಸಂಬಂಧ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
2014ರಲ್ಲಿ ನಡೆಯುವ ಚುನಾವಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಹಾರಾಷ್ಟ್ರದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ನಿತಿನ್ ಗಡ್ಕರಿ ಗೈರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸಭೆಯ ಬಳಿಕೆ ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿದ ಮೋದಿ, 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಯು ಎನ್ಡಿಎಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಮೇಲೆ ಬಿಜೆಪಿಗೆ 2014ರ ಲೋಕಸಭಾ ಚುನಾವಣೆ ಸವಾಲಾಗಿದೆ. ಮುಂಬೈಗೆ ಭೇಟಿ ನೀಡಿರುವ ಮೋದಿ ಅವರು ಶಿವಸೇನಾ ಸಂಘಟನೆ ಮತ್ತು ತಮ್ಮ ಮಧ್ಯೆ ಇರುವ ಭಿನ್ನಭಿಪ್ರಾಯವನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಉತ್ತರಾಖಂಡದಲ್ಲಿ ಸಿಲುಕಿದ್ದ ಸುಮಾರು 15 ಸಾವಿರಕ್ಕೂ ಹೆಚ್ಚು ಗುಜರಾತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿಕೆ ನೀಡಿ ಮೋದಿ ಶಿವಸೇನಾ ಕೆಂಗಣ್ಣಿಗೆ ಗುರಿಯಾಗಿದ್ದರು. ಕೇವಲ ಗುಜರಾತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿರುವ ಮೋದಿ ಇತರೆ ರಾಜ್ಯಗಳ ಸಂತ್ರಸ್ತರನ್ನು ಕಡೆಗಣಿಸಿದಂತಾಗಿದೆ. ಬಿಜೆಪಿ ಪ್ರಮುಖ ನಾಯಕನಾಗಿರುವ ಮೋದಿ ಅವರು ಮುಂದೆ ರಾಷ್ಟ್ರಮಟ್ಟದ ನಾಯಕರಾಗಲಿದ್ದಾರೆ. ಆದರೆ ಅವರು ಗುಜರಾತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರಮಟ್ಟದ ನಾಯಕನಿಗೆ ಕೇವಲ ಗುಜರಾತ್ ರಾಜ್ಯ ಮಾತ್ರ ಸೀಮಿತವಲ್ಲ ಎಂದು ಮೋದಿ ವಿರುದ್ಧ ಶಿವಸೇನಾ ಕಿಡಿ ಕಾರಿತ್ತು.