ಸಿಬಿಐಗೆ ಹೆಚ್ಚಿನ ಅಧಿಕಾರ: ಕೇಂದ್ರ ಸಂಪುಟ ಒಪ್ಪಿಗೆ
ನವದೆಹಲಿ: ಕೇಂದ್ರಾ ತನಿಖಾ ತಂಡ(ಸಿಬಿಐ)ಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಕೇಂದ್ರ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಸಿಬಿಐ ಸ್ವಾತಂತ್ರ್ಯದ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ಇಂದು ಚರ್ಚೆ ನಡೆಸಲಾಗಿದ್ದು, ಸಿಬಿಐ ತನ್ನ ಕೆಲಸ ನಿರ್ವಹಿಸಲು ಹೆಚ್ಚಿನ ಅಧಿಕಾರ ಬೇಕಾಗಿದ್ದು, ಇದಕ್ಕೆ ಸಂಪುಟ ಸಮ್ಮತಿಸಿದೆ.
ಯಾವುದೇ ಒತ್ತಡವಿಲ್ಲದೇ ಸಿಬಿಐ ಅಧಿಕಾರಿಗಳು ಪ್ರಕರಣಗಳ ತನಿಖೆ ನಡೆಸಬೇಕು. ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐಗೆ ಹೆಚ್ಚಿನ ಕಾನೂನು ಬಲ ಒದಗಿಸುವಲ್ಲಿ ಪ್ರಸ್ತುತ ಕಾಯ್ದೆಗೆ ತಿದ್ದುಪಡಿ ತರಲು ಅಥವಾ ಪ್ರತ್ಯೇಕ ಕಾಯ್ದೆಯನ್ನು ಜಾರಿಗೊಳಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿತ್ತು.
ಪ್ರಸ್ತುತ ಪರಿಸ್ಥಿತಿ ಪ್ರಕಾರ ಸಿಬಿಐಗೆ ಇರುವ ಅಧಿಕಾರ ಸಾಲದು. ಪ್ರಭಾವ ಶಾಲಿ ವ್ಯಕ್ತಿಗಳು ಒತ್ತಡ ಹೇರುತ್ತಿದ್ದು, ಅನೇಕ ಪ್ರಕರಣಗಳು ಮುಚ್ಚಿಹೋಗುವ ಸಾಧ್ಯತೆಗಳು ಕಂಡುಬರುತ್ತವೆ. ಆದ್ದರಿಂದ ಸಿಬಿಐಗೆ ಹೆಚ್ಚಿನ ಅಧಿಕಾರ ನೀಡಿ, ತನ್ನ ಕಾರ್ಯವನ್ನು ಸುಗಮವಾಗಿ ನಿರ್ವಹಿಸ ಬಲ್ಲದಾಗಿದೆ ಎಂದು ಹೇಳಲಾಗಿತ್ತು.