ಆರ್ಟಿಐನಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವ ಹುನ್ನಾರ
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ)ನಿಂದ ರಾಜಕೀಯ ಪಕ್ಷಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಶುಕ್ರವಾರ ಚಿಂತನೆ ನಡೆಸಿದೆ.
ಈ ಸಂಬಂಧ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ ನಂತರ ಕೇಂದ್ರ ಸರ್ಕಾರ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಆರ್ಟಿಐನಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್ಟಿಐ ಕಾಯ್ದೆ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಮುಂಬರುವ ಚಳಿಗಾಲ ಅಧಿವೇಶನ ದಿನಾಂಕ ನಿಗದಿಯಾದ ನಂತರ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಲಿದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಕಾಯ್ದೆಯಲ್ಲಿ ತಿದ್ದುಪಡಿ ತಂದರೆ, ರಾಜಕೀಯ ಪಕ್ಷಗಳನ್ನು ಸಾರ್ವಜನಿಕರೆಂದು ಹಾಗೂ ಸಾರ್ವಜನಿಕರ ಅಧಿಕಾರಿಗಳೆಂದು ಪರಿಗಣಿಸಲಾಗುವುದಿಲ್ಲ ಹಾಗೂ ಮಾಹಿತಿ ಹಕ್ಕು ಆಯೋಗ ಕೆಲವು ಹೇಳಿಕೆಗಳನ್ನು ತಪ್ಪಾಗಿ ವಿಶ್ಲೇಷಿಸಿದೆ ಎಂದಾಗುವುದು.
ಮಾಹಿತಿ ಹಕ್ಕು ಆಯೋಗ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದೆ ಎಂದು ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್, ಬಹುಜನ ಸಮಾಜ ಪಕ್ಷ ಸೇರಿದಂತೆ ಇತರೆ ಪಕ್ಷಗಳು ಆರೋಪಿಸಿದ್ದವು.
ಈ ಹಿನ್ನಲೆಯಲ್ಲಿ ಆರ್ಟಿಐ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಚಿಂತನೆ ನಡೆಸಿದೆ.