ಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ
ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ವಾಯು ಪಡೆ, ಐಟಿಬಿಪಿ ಹಾಗೂ ..
ಡೆಹ್ರಾಡೂನ್: ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ವಾಯು ಪಡೆ, ಐಟಿಬಿಪಿ ಹಾಗೂ ಎನ್‌ಡಿಆರ್‌ಎಫ್‌ನ ಎಲ್ಲ 20 ಯೋಧರಿಗೆ ಶುಕ್ರವಾರ ಡೆಹ್ರಾಡೂನ್‌ನಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.
ಕೇಂದ್ರ ಗೃಹ ಸಚಿವ ಶುಶಿಲ್ ಕುಮಾರ್ ಶಿಂಧೆ ಅವರ ಉಪಸ್ಥಿತಿಯಲ್ಲಿ ಹುತಾತ್ಮ ಯೋಧರಿಗೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿ ಗೌರವ ಸಲ್ಲಿಸಲಾಯಿತು. ಈ ವೇಳೆ ಹಾಜರಿದ್ದ ಸೇನಾಪಡೆ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಅವರು ಸಹ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಳೆದ ಮಂಗಳವಾರ ಉತ್ತರಾಖಂಡದಲ್ಲಿ ಯಾತ್ರಾರ್ಥಿಗಳನ್ನು ರಕ್ಷಿಸುವ ಸಮಯದಲ್ಲಿ ಎಂಐ 17 ಹೆಲಿಕಾಪ್ಟರ್ ಪತನವಾಗಿ ರಾಜ್ಯದ ಇಬ್ಬರು ಯೋಧರು ಸೇರಿದಂತೆ ಒಟ್ಟು 20 ಯೋದರು ಹುತಾತ್ಮರಾಗಿದ್ದರು.
ನಾಳೆ ರಕ್ಷಣಾ ಕಾರ್ಯ ಅಂತ್ಯ:
ಪ್ರವಾಹ ಸಂತ್ರಸ್ಥರನ್ನು ರಕ್ಷಿಸುತ್ತಿರುವ ಸೇನಾಪಡೆಯ ಕಾರ್ಯಾಚರಣೆ ನಾಳೆ ಅಂತ್ಯವಾಗಲಿದೆ ಎಂದು ಉತ್ತರಾಖಂಡ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಏತನ್ಮಧ್ಯೆ, ಪರಿಹಾರ ಕಾರ್ಯಕ್ಕೆ ಗುರುವಾರವೂ ಮಳೆ ಅಡ್ಡಿಯಾಗಿ ಪರಿಣಮಿಸಿದ್ದು, ರಕ್ಷಣಾ ಕಾರ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಬೇಕಾಯಿತು. ಕೆಲವೆಡೆ ಕೇವಲ ಕಾಲ್ದಾರಿ ಮತ್ತು ನೆಲಮಾರ್ಗದಲ್ಲಷ್ಟೇ ರಕ್ಷಣಾ ಕಾರ್ಯ ಮುಂದುವರಿಯಿತು. ಇಡೀ ದಿನ ಒಟ್ಟು 1500 ಮಂದಿಯನ್ನು ಸ್ಥಳಾಂತರಿಸಲಾಯಿತು. ಇನ್ನೂ 2 ಸಾವಿರ ಮಂದಿ ಸಿಕ್ಕಿ ಹಾಕಿಕೊಂಡಿದ್ದು, ಆದಷ್ಟು ಶೀಘ್ರ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.