ಕಾಶ್ಮೀರದ ಸಮಸ್ಯೆ ಭಾರತದ ಆಂತರಿಕ ವಿಷಯ: ಖುರ್ಷಿದ್
ಶ್ರೀನಗರ: ಕಾಶ್ಮೀರದ ಸಮಸ್ಯೆ ಭಾರತದ ಆಂತರಿಕ ವಿಷಯ ಎಂದು ವಿದೇಶಾಂಗ ವ್ಯವಹಾರಿಕ ಸಚಿವ ಸಲ್ಮಾನ್ ಖುರ್ಷಿದ್ ಶುಕ್ರವಾರ ಹೇಳಿದ್ದಾರೆ.
ಭಾರತದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ತಮ್ಮದೇ ಆದ ವ್ಯವಸ್ಥೆ ಇದೆ. ಇದರ ಬಗ್ಗೆ ಬೇರೆ ದೇಶದ ಪಡೆಗಳು ತಲೆ ಹಾಕುವುದು ಬೇಡ ಎಂದು ಖುರ್ಷಿದ್ ತಿಳಿಸಿದ್ದಾರೆ.
ನಮ್ಮ ದೇಶದ ಬಗ್ಗೆ ಇತರೆ ದೇಶಗಳು ಬೆರಳು ತೋರಿಸುವುದು ಬೇಡ, ನಾವು ಏನೇ ತಪ್ಪು ಮಾಡಿದ್ದರೂ ಅದನ್ನು ಸರಿಪಡಿಸುವಂತಹ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಕಾಶ್ಮೀರದ ಸಮಸ್ಯೆ ಆಂತರಿಕವಾಗಿದ್ದು, ಇದರ ಬಗ್ಗೆ ಬೊಟ್ಟು ಮಾಡುವುದು ಬೇಡ ಎಂದು ಪರೋಕ್ಷವಾಗಿ ಬೇರೆ ದೇಶಗಳ ವಿರುದ್ಧ ಖುರ್ಷಿದ್ ಕಿಡಿ ಕಾರಿದ್ದಾರೆ.
ಇಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನರ ಅಭಿಲಾಷೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಜವಬ್ದಾರಿ ಇದೆ. ನಮ್ಮ ಸರ್ಕಾರ ಹೊಣೆಗಾರಿಕೆಯನ್ನು ಪೂರ್ಣವಾಗಿ ತಿಳಿದುಕೊಂಡಿದೆ. ಅಭಿಲಾಷೆ ಹೊಂದಿರುವ ಜನರು ಸಹೋದರ ಮತ್ತು ಸಹೋದರಿಯರಿದ್ದಂತೆ. ಅವರಿಗೆ ನೀಡಬೇಕಾದ ಗೌರವ ನಮಗೆ ತಿಳಿದಿದೆ.
ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಸಮಸ್ಯೆ ಎಂದು ಕೊಳ್ಳಬಾರದು, ದೇಶದ ಮೂಲೆ-ಮೂಲೆಯಲ್ಲೂ ಸಮಸ್ಯೆ ಇದೆ. ಎಲ್ಲಾ ರಾಜ್ಯಗಳಲ್ಲೂ ನಿರುದ್ಯೋಗಿಗಳು, ಮಹಿಳೆ ಸಮಸ್ಯೆ , ಆರೋಗ್ಯ ಸಮಸ್ಯೆ ಮತ್ತು ಬಡತನ ಕಿತ್ತು ತಿನ್ನುತ್ತಿದೆ.
ಆದ್ದರಿಂದ ಕಾಶ್ಮೀರದ ಜನತೆ ದೃಢವಾಗಿರಬೇಕು. ಧೈರ್ಯಗೆಡಬಾರದು. ಸರ್ಕಾರ ಕಾಶ್ಮೀರದ ಅಭಿವೃದ್ಧಿ ಮಾಡಲಿದ್ದು, ಜನತೆಗೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ಕಲ್ಪಿಸಲಿದೆ ಎಂದು ಖುರ್ಷಿದ್ ಭರವಸೆ ನೀಡಿದ್ದಾರೆ.