ಸ್ಪಾಟ್ ಫಿಕ್ಸಿಂಗ್: ಪ್ರಮುಖ ಬುಕ್ಕಿ ಬಂಧನ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಬುಕ್ಕಿ ಜಿತೇಂದ್ರ ಸಿಂಗ್ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಹಮದಬಾದ್‌ನಲ್ಲಿ ಜಿತೇಂದ್ರ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಸಾಕೆತ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಬುಕ್ಕಿ ಚಂದ್ರೇಶ್ ಪಟೇಲ್ ಅವರು ಜಿತೇಂದ್ರ ಸಿಂಗ್ ಅವರ ಸಹೋದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ರಾಜಸ್ಥಾನ ರಾಯಲ್ಸ್ ನ ಆಟಗಾರರಾಗಿದ್ದ ಅಜಿತ್ ಚಂಡೀಲ ಸೇರಿದಂತೆ ಇಬ್ಬರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಜುಲೈ 1ಕ್ಕೆ ಮುಂದೂಡಿತ್ತು.
ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇಂದು ಪ್ರಕರಣದ ಪ್ರಮುಖ ಬುಕ್ಕಿ ಜಿತೇಂದ್ರ ಸಿಂಗ್ ಅವರನ್ನು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದ ಹಿನ್ನಲೆಯಲ್ಲಿ ಕ್ರಿಕೆಟ್ ಆಟಗಾರರಾದ ಎಸ್. ಶ್ರೀಶಾಂತ್, ಚಂಡೀಲಾ ಮತ್ತು ಅಂಕೀತ್ ಚವಣ್ ಸೇರಿದಂತೆ ಬುಕ್ಕಿಗಳನ್ನು ಬಂಧಿಸಿದ್ದ ದೆಹಲಿ ಪೊಲೀಸರು ಮೋಖಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸಂಬಂಧ ಜೂನ್ 10ರಂದು ಶ್ರೀಶಾಂತ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.