ಉತ್ತರಾಖಂಡ: ರಕ್ಷಣಾ ಕಾರ್ಯಕ್ಕೆ ಪ್ರತಿಕೂಲ ಹವಾಮಾನ ಅಡ್ಡಿ
ಉತ್ತರಾಖಂಡದಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಮುಕ್ತಾಯದ ಹಂತ ತಲುಪಿದೆ..
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಮುಕ್ತಾಯದ ಹಂತ ತಲುಪಿದೆ. ಆದರೆ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ತೀವ್ರ ಅಡಚಣೆ ಉಂಟುಮಾಡಿದೆ.
ಕೇದಾರನಾಥ್ ಹಾಗೂ ಗುಪ್ತಕಾಶಿಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸಂತ್ರಸ್ತರನ್ನು ಹಾಗೂ ಅವಶೇಷಗಳಡಿಯಿಂದ ಮೃತ ದೇಹಗಳನ್ನು ಹೊರ ತೆಗೆಯುವುದು ಭಾರಿ ಕಷ್ಟವಾಗಿ ಪರಿಣಮಿಸಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಇನ್ನು 4,650 ಮಂದಿ ನಾಪತ್ತೆಯಾಗಿದ್ದು, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 842ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರದ ಅಧಿಕೃತ ವರದಿಗಳು ತಿಳಿಸಿವೆ.
ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ವೀಕ್ಷಣೆಗೆ ತೆರಳಬೇಕಿದ್ದ ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದು, ಅನುಕೂಲಕರ ವಾತಾವರಣಕ್ಕಾಗಿ ಕಾಯುತ್ತಿದ್ದಾರೆ.