ಗೋಪಿನಾಥ್ ಮುಂಡೆಗೆ ಚು.ಆಯೋಗದಿಂದ ನೋಟಿಸ್?
ಚುನಾವಣೆಯಲ್ಲಿ 8 ಕೋಟಿ ವೆಚ್ಚ ಮಾಡಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಹಿರಿಯ ನಾಯಕ ಗೋಪಿನಾಥ್ ..
ಮುಂಬೈ: ಚುನಾವಣೆಯಲ್ಲಿ 8 ಕೋಟಿ ವೆಚ್ಚ ಮಾಡಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಹಿರಿಯ ನಾಯಕ ಗೋಪಿನಾಥ್ ಮುಂಡೆ ಅವರಿಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ತಾವು ಮಾಡಿದ ವೆಚ್ಚದ ಬಗ್ಗೆ ವಿವರಣೆ ನೀಡುವಂತೆ ಗೋಪಿನಾಥ್ ಮುಂಡೆಗೆ ಇಂದು ಚುನಾವಣೆ ಆಯೋಗ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಆಯೋಗದ ನೋಟಿಸ್ಗೆ ಉತ್ತರಿಸಲು ಮುಂಡೆ ಅವರು ಒಂದು ವಾರಗಳ ಕಾಲವಾಶ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2009ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ಆಯೋಗವು ವೆಚ್ಚಕ್ಕೆ 25 ಲಕ್ಷದ ಮಿತಿ ಹೇರಿದ್ದರೂ ನಾನು ಬರೋಬ್ಬರಿ 8 ಕೋಟಿ ವೆಚ್ಚ ಮಾಡಿದ್ದೆ. ಹೀಗೆಂದು ಹೇಳುವ ಮೂಲಕ ಬಿಜೆಪಿ ಹಿರಿಯ ನಾಯಕ ಗೋಪಿನಾಥ್ ಮುಂಡೆ ವಿವಾದ ಸೃಷ್ಟಿಸಿದ್ದಾರೆ.
ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲೇ ಮುಂಡೆ ಈ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಈ ಹೇಳಿಕೆ ವಿರುದ್ಧ ತಾಕತ್ತಿದ್ದರೆ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೂ ಸವಾಲೆಸೆದಿದ್ದಾರೆ. ಇದು ಈಗ ವಿವಾದ ಸೃಷ್ಟಿಸಿದ್ದು, ಮುಂಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಇಂತಹ ಅಭ್ಯರ್ಥಿಮುಂದೆ ಚುನಾವಣೆಗೆ ಸ್ಪರ್ಧಿಸಬೇಕೇ, ಬೇಡವೇ ಎಂಬ ಬಗ್ಗೆ ಆಯೋಗವೇ ತೀರ್ಮಾನ ಕೈಗೊಳ್ಳಬೇಕು ಎಂದೂ ಕಾಂಗ್ರೆಸ್ ಹೇಳಿದೆ.