ತನ್ನನ್ನು ಬೆಂಬಲಿಸಿದ ಸೋನಿಯಾಗೆ ಕನಿಮೋಳಿ ಧನ್ಯವಾದ
ಕಳೆದ ಗುರುವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಡಿಎಂಕೆ ನಾಯಕಿ...
ನವದೆಹಲಿ: ಕಳೆದ ಗುರುವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಡಿಎಂಕೆ ನಾಯಕಿ ಕನಿಮೋಳಿ ಅವರು ಶನಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಧನ್ಯವಾದ ಹೇಳಿದ್ದಾರೆ.
ನನ್ನನ್ನು ಬೆಂಬಲಿಸಿದ್ದಕ್ಕಾಗಿ ಪಕ್ಷದ ಪರವಾಗಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಹೇಳಲು ತಾವು ಆಗಮಿಸಿರುವುದಾಗಿ ಸೋನಿಯಾ ಭೇಟಿ ಬಳಿಕ ಕನಿಮೋಳಿ ವರದಿಗಾರರಿಗೆ ತಿಳಿಸಿದ್ದಾರೆ.
ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರೊಂದಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಟಿ.ಆರ್.ಬಾಲು ಅವರು ಸೋನಿಯಾ ಭೇಟಿಗೆ ಆಗಮಿಸಿದ್ದರು.
ಕನಿಮೋಳಿ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಗುರುವಾರ ತಮಿಳುನಾಡಿನಿಂದ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ಐವರು ಶಾಸಕರು ಕನಿಮೋಳಿ ಪರ ಮತ ಚಲಾಯಿಸಿದ್ದರಿಂದ, ಅವರು ಒಟ್ಟು 31 ಮತಗಳಿಂದ ಜಯ ಸಾಧಿಸಿದ್ದರು. ಇದೇ ವೇಳೆ, ವಿ. ಮೈತ್ರೇಯನ್ ಸೇರಿ ಎಐಎಡಿಎಂಕೆಯ 4 ಅಭ್ಯರ್ಥಿಗಳು, ಸಿಪಿಐನ ಡಿ.ರಾಜಾ ಅವರೂ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ.