ಮಂಡಿಯಲ್ಲಿ ಸ್ಥಾನ ಉಳಿಸಿಕೊಂಡ ಕಾಂಗ್ರೆಸ್
ಹಿಮಾಚಲ ಪ್ರದೇಶದ ಮಂಡಿ ಸಂಸದೀಯ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪರಾಭವಗೊಳಿಸಿದೆ...
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಸಂಸದೀಯ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪರಾಭವಗೊಳಿಸಿದೆ.
ಮಂಡಿ ಕ್ಷೇತ್ರದಲ್ಲಿ ಜೂನ್ 23 ಮತ್ತು 27ರಂದು ನಡೆದ ಉಪಚುನಾವಣೆ ಮತ ಎಣಿಕೆ ಭಾನುವಾರ ನಡೆಸಲಾಗಿದ್ದು, ಕಾಂಗ್ರೆಸ್ ಜಯಶಾಲಿಯಾಗಿದೆ.
ಭಾರತೀಯ ಜನತಾ ಪಕ್ಷವನ್ನು 1.36 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ ಕಾಂಗ್ರೆಸ್ನ ಅಭ್ಯರ್ಥಿ ಪ್ರತಿಭಾ ಸಿಂಗ್ ಜಯದ ನಗೆ ಬೀರಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶಾಸಕ ಮತ್ತು ಮಾಜಿ ಸಚಿವ ಜೈ ರಾಮ್ ಠಾಕೂರ್ ಅವರಿಗೆ ಸೋಲುಂಟಾಗಿದೆ.
ಜಯಗಳಿಸಿರುವ ಪ್ರತಿಭಾ ಸಿಂಗ್ ಮತ್ತು ಅವರ ಪತಿ, ಮುಖ್ಯಮಂತ್ರಿ ವೀರ್ಭದ್ರಾ ಸಿಂಗ್ ಅವರು ಮತದಾರರಿಗೆ ವಂದನೆಗಳನ್ನು ತಿಳಿಸಿದ್ದಾರೆ.
ಮತದಾರರು ತಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಅವರ ನಂಬಿಕೆ ಉಳಿಸುವುದೇ ನಮ್ಮ ಮುಂದಿನ ಕೆಲಸವಾಗಿದೆ. ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದ್ದು, ಈಗಿನ ಉತ್ಸಾಹದಲ್ಲೇ ದುಡಿಯಲಿದೇ ಎಂದು ಹೇಳಿದ್ದಾರೆ.