ಉತ್ತರಾಖಂಡ: ಇನ್ನು 900 ಮಂದಿ ಅಪಾಯದಲ್ಲಿ
ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಕ್ಷಣಾಪಡೆ ಹಾಗೂ ಇತರೆ ಸಂಸ್ಥೆಗಳು..
ಡೆಹ್ರಾಡೂನ್: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಕ್ಷಣಾಪಡೆ ಹಾಗೂ ಇತರೆ ಸಂಸ್ಥೆಗಳು ಬದ್ರಿನಾಥದಲ್ಲಿ ಅಪಾಯಕ್ಕೆ ಸಿಲುಕಿರುವ ಇನ್ನು 900 ಮಂದಿಯನ್ನು ರಕ್ಷಿಸಲು ಹರ ಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಪ್ರತಿಕೂಲ ವಾತಾವರಣ ಸಹ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ.
ವರದಿಗಳ ಪ್ರಕಾರ, ಸ್ಥಳೀಯರು ಸೇರಿದಂತೆ ಬದ್ರಿನಾಥ, ಮನೆರಿ ಮತ್ತು ಹರ್ಸಿಲ್ನಲ್ಲಿ ಇನ್ನು 1500 ಮಂದಿ ಅಪಾಯದಲ್ಲಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶದಲ್ಲಿ ಇನ್ನು 3000 ಮಂದಿ ನಾಪತ್ತೆಯಾಗಿದ್ದು, ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಅವಶೇಷಗಳನ್ನು ತೆರವುಗೊಳಿಸಿ, ಮೃತ ದೇಹಗಳನ್ನು ಪತ್ತೆಹಚ್ಚುವ ಕಾರ್ಯ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಇಂದು ಸಂಜೆ ತೆರೆ ಬೀಳುವ ಸಾಧ್ಯತೆ ಇದೆ.
ಜೂ.16ರಂದು ಸಂಭವಿಸಿದ ಮಹಾಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೇ ಅಧಿಕೃತಪಡಿಸಿದೆ. 'ಮಹಾಪ್ರವಾಹದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1500 ಮಂದಿ ಇನ್ನೂ ಬೆಟ್ಟಗುಡ್ಡಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ' ಎಂದು ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ, 1500ಕ್ಕೂ ಹೆಚ್ಚು ಸಂಖ್ಯೆಯ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಇನ್ನೂ ಆಗಿಲ್ಲ. ಅವರಿನ್ನೂ ಗುಡ್ಡಕಾಡುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.