ಮೋದಿ ಅತ್ಯಂತ ಜನಪ್ರಿಯ ಸಿಎಂ: ರಾಜನಾಥ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶನಿವಾರ ಹಾಡಿ ಹೊಗಳಿದ್ದು,..
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶನಿವಾರ ಹಾಡಿ ಹೊಗಳಿದ್ದು, ಮೋದಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಮೋದಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ಪಕ್ಷದ ಮೊದಲ ವ್ಯಕ್ತಿಯಾಗಿದ್ದಾರೆ ಎಂದರು.
ಎಲ್ಲ ರಾಷ್ಟ್ರಗಳು ಮೋದಿ ಅವರ ಆಡಳಿತವನ್ನು ಪ್ರಶಂಸಿಸುತ್ತಿವೆ ಮತ್ತು ಅವರ ಅಭಿವೃದ್ಧಿಯನ್ನು ಅನುಸರಿಸುತ್ತಿವೆ ಎಂದರು. ಅಲ್ಲದೆ ಪಕ್ಷದ ಕಾರ್ಯಕರ್ತರು ಸಹ ಅವರ ಉತ್ಸಾಹಕ್ಕೆ ಬೆಂಬಲ ನೀಡಬೇಕು ಎಂದು ರಾಜನಾಥ್ ಸಿಂಗ್ ಕೇಳಿಕೊಂಡರು.
ಪಕ್ಷದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸಹ ತಮ್ಮ ತಮ್ಮ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಸಮರ್ಥಿಸಿಕೊಂಡ ಸಿಂಗ್, ಅವರ ವಿರುದ್ಧ ಬಂದಿರುವ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರ ರಹಿತವಾಗಿವೆ ಎಂದರು.