ಮೇಘಾಲಯ ಮುಖ್ಯಮಂತ್ರಿಯಾಗಿ ಮುಕುಲ್ ಸಂಗ್ಮಾ ಪ್ರಮಾಣ
ಎರಡನೇ ಬಾರಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಮುಕುಲ್ ಮಂಡ ಸಂಗ್ಮಾ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
ಶಿಲಾಂಗ್: ಎರಡನೇ ಬಾರಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಮುಕುಲ್ ಮಂಡ ಸಂಗ್ಮಾ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎಸ್.ಮೂಶಹರಿ ಅವರು 47 ವರ್ಷದ ಕಾಂಗ್ರೆಸ್ ನಾಯಕ ಸಂಗ್ಮಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮೇಘಾಲಯ ವಿಧಾನಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಸಂಗ್ಮಾ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತ್ತು.
ಮುಕುಲ್ ಸಂಗ್ಮಾ ಅವರು ಈ ವಾರದಲ್ಲಿ ತಮ್ಮ ಸಚಿವ ಸಂಪುಟದ ಸಚಿವರ ಪಟ್ಟಿಯನ್ನು ಪ್ರಕಟಿಸಲಿದ್ದಾರೆ.
ನೀವು ಒಬ್ಬರೇ ಈಗ ಮುಖ್ಯಮಂತ್ರಿಯಾಗ ಪ್ರಮಾಣ ವಚನ ಸ್ವೀಕರಿಸಿ, ನಂತರ ಸಚಿವ ಸಂಪುಟವನ್ನು ವಿಸ್ತರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ತಮಗೆ ಸೂಚಿಸಿದ್ದರು ಎಂದು ಸಿಎಂ ಮುಕುಲ್ ಸಂಗ್ಮಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
60 ಸ್ಥಾನಗಳನ್ನು ಹೊಂದಿರುವ ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 29 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತಕ್ಕೆ ಎರಡು ಸ್ಥಾನಗಳ ಕೊರತೆ ಇತ್ತು. ಆದರೆ ಹೊಸದಾಗಿ ಆಯ್ಕೆಯಾಗಿರುವ 11 ಪಕ್ಷೇತರ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದ್ದಾರೆ.