ಹೈ ಸ್ಫೋಟ: ಎನ್‌ಎಸ್‌ಜಿ ಕಮಾಂಡರ್‌ಗೆ ಐಎಸ್‌ಐ ಕರೆ
ನವದೆಹಲಿ: ಹೈದರಾಬಾದ್ ಅವಳಿ ಬಾಂಬ್ ಸ್ಫೋಟದ ತನಿಖೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪಾಕಿಸ್ತಾನದ ಐಎಸ್‌ಐ ಮಧ್ಯವರ್ತಿಯೊಬ್ಬ ಭಾರತದ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಕಮಾಂಡರ್ ಒಬ್ಬರಿಗೆ ಕರೆ ಮಾಡಿದ ಮಾಹಿತಿ ಮಂಗಳವಾರ ಬಹಿರಂಗಗೊಂಡಿದೆ.
ತನಿಖೆಯ ಮಾಹಿತಿ ತಿಳಿದುಕೊಳ್ಳಲು ಎನ್‌ಎಸ್‌ಜಿ ಕಮಾಂಡರ್ ಒಬ್ಬರಿಗೆ ಐಎಸ್‌ಐ ಮಧ್ಯವರ್ತಿ ಇಂಟರ್‌ನೆಟ್ ಮೂಲಕ ಕರೆ ಮಾಡಿದ್ದು, ಇಂಟರ್‌ನೆಟ್ ಕರೆಯನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದಾರೆ. ಇವರು ಎನ್‌ಎಸ್‌ಜಿಗೆ ಕಮಾಂಡರ್ ಆಗಿ ನಿಯೋಜನೆಗೊಂಡಿದ್ದರು.
ಈ ಸಂಬಂಧ ತನಿಖೆ ಪ್ರಾರಂಭವಾಗಿದ್ದು, ಕರೆ ಸ್ವೀಕರಿಸಿದ ಕಮಾಂಡರ್ ಅವರನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಎನ್‌ಎಸ್‌ಜಿಯ ಚಲನವಲನಗಳ ಮಾಹಿತಿಯ ತಿಳಿದುಕೊಳ್ಳಲು ಐಎಸ್‌ಐ ಮಧ್ಯವರ್ತಿ ಕರೆ ಮಾಡಿದ್ದನೆಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆದರೆ ಹೈದರಾಬಾದ್ ಸ್ಫೋಟದ ಬಗ್ಗೆ ಆತನಿಗೆ ಕಮಾಂಡರ್ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕರೆ ಮಾಡಿದ ವ್ಯಕ್ತಿ ಪಾಕಿಸ್ತಾನದಿಂದ ಇಂಟರ್‌ನೆಟ್ ಮೂಲಕ ಕರೆ ಮಾಡಿದ್ದು, ಆತ ಐಎಸ್‌ಐನ ಮಧ್ಯವರ್ತಿ ಎಂದು ಶಂಕಿಸಲಾಗಿದೆ ಎಂದು ಎನ್‌ಎಸ್‌ಜಿ ಮುಖ್ಯಸ್ಥ ಅರವಿಂದ್ ರಂಜನ್ ತಿಳಿಸಿದ್ದಾರೆ. ಈ ಪ್ರಕರಣವನ್ನು ಎನ್‌ಎಸ್‌ಜಿ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಉನ್ನತ ತನಿಖಾ ದಳವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಕರೆ ಮಾಡಿದ ವ್ಯಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಆದರೆ ಮೂಲಗಳ ಪ್ರಕಾರ ಆ ವ್ಯಕ್ತಿ ಐಎಸ್‌ಐ, ಉಗ್ರಗಾಮಿ, ಪಾಕ್ ಆಕ್ರಮಿತ ಕಾಶ್ಮೀರದವನು ಇರಬೇಕು ಎಂದು ಎನ್‌ಎಸ್‌ಜಿ ಶಂಕೆ ವ್ಯಕ್ತಪಡಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.