ಡಿಎಸ್ಪಿ ಹತ್ಯೆ ಪ್ರಕರಣ ತನಿಖೆಗೆ ಸಂಪೂರ್ಣ ಸಹಕಾರ: ಅಖಿಲೇಶ್
ಪೊಲೀಸ್ ಅಧಿಕಾರಿ ಹಾಗೂ ಕುಂದಾ ಗ್ರಾಮದ ಮುಖ್ಯಸ್ಥನ ಹತ್ಯೆ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ಸಹಕಾರ..
ಪ್ರತಾಪಗಢ: ಪೊಲೀಸ್ ಅಧಿಕಾರಿ ಹಾಗೂ ಕುಂದಾ ಗ್ರಾಮದ ಮುಖ್ಯಸ್ಥನ ಹತ್ಯೆ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬುಧವಾರ ಹೇಳಿದ್ದಾರೆ.
ಹತ್ಯೆಯಾದ ಗ್ರಾಮದ ಮುಖ್ಯಸ್ಥ ನಾನ್ಹೆ ಯಾದವ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅಖಿಲೇಶ್, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದ್ದು, ತನಿಖೆಯ ನಂತರ ಎಲ್ಲ ಸತ್ಯ, ಅಸತ್ಯತೆ ಬಯಲಾಗಲಿದೆ ಎಂದು ಹೇಳಿದರು.
ಈ ಮಧ್ಯೆ, ಡಿಎಸ್ಪಿ ಝಿಯಾ-ಉಲ್-ಹಕ್ ಹತ್ಯೆಯ ಪ್ರಕರಣದ ಆರೋಪಿ ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯ ಅವರನ್ನು ತಕ್ಷಣ ಬಂಧಿಸಲು ಉತ್ತರ ಪ್ರದೇಶ ಪೊಲೀಸರು ನಿರಾಕರಿಸಿದ್ದಾರೆ ಮತ್ತು ಅಗತ್ಯ ಬಿದ್ದರೆ ಪ್ರಾಥಮಿಕ ತನಿಖೆಯ ನಂತರ ಬಂಧಿಸುವುದಾಗಿ ಹೇಳಿದ್ದಾರೆ.
ಡಿಎಸ್ಪಿ ಪತ್ನಿ ಪರ್ವೀನ್ ಅಜಾದ್ ಅವರ ಬೇಡಿಕೆಯಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ ಮತ್ತು ಡಿಎಸ್ಪಿ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ ಪೊಲೀಸರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಖಿಲೇಶ್ ತಿಳಿಸಿದರು.