ಬಳ್ಳಾರಿ ಡಿಸಿ ಬಿಸ್ವಾಸ್ ವಿರುದ್ಧ ಸಂಸದೆ ಶಾಂತಾ ಕಿಡಿ
ತಮಗೆ ಮತದಾನಕ್ಕೆ ಅವಕಾಶ ನೀಡದ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ವಿರುದ್ಧ ಸಂಸದೆ ಶಾಂತಾ...
ಬಳ್ಳಾರಿ: ತಮಗೆ ಮತದಾನಕ್ಕೆ ಅವಕಾಶ ನೀಡದ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ವಿರುದ್ಧ ಸಂಸದೆ ಜೆ.ಶಾಂತಾ ಅವರು ಗುರುವಾರ ಕಿಡಿ ಕಾರಿದ್ದಾರೆ.
ಗುರುತಿನ ಚೀಟಿಯಲ್ಲಿ ಅವರ ಹೆಸರು ತಿಪ್ಪಮ್ಮ ಎಂದು ಬದಲಾಗಿದ್ದರಿಂದ ಅವರಿಗೆ ಮತದಾನ ಮಾಡಲು ಜಿಲ್ಲಾಧಿಕಾರಿ ನಿರಾಕರಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಶಾಂತಾ, ಜಿಲ್ಲಾಧಿಕಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿಗಳು ಯಾವುದೋ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಈ ಕೂಡಲೇ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ದೋಷ ಮಾಡಲಾಗಿದೆ ಎಂದು ಆರೋಪಿಸಿದರು.
ಮತ ಪಟ್ಟಿಯಲ್ಲಿ ಫೋಟೊ ಸರಿಯಾಗಿದೆ. ಆದರೆ ಹೆಸರು ಮಾತ್ರ ತಪ್ಪಾಗಿದೆ. ಆದರೂ ಮತದಾನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ಸಂಬಂಧ ತಾವು ಚುನಾವಣಾ ಆಯೋಗಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡುವುದಾಗಿ ಶಾಂತಾ ತಿಳಿಸಿದರು.