ಡಿಎಸ್ಪಿ ಹುದ್ದೆಗೆ ಹತ್ಯೆಗಿಡಾದ ಹಕ್ ಪತ್ನಿ ಪಟ್ಟು
ಉತ್ತರ ಪ್ರದೇಶ ಸರ್ಕಾರ ತಮಗೆ ನೀಡಿದ್ದ ಸರ್ಕಾರಿ ಹುದ್ದೆಯನ್ನು ನಿರಾಕರಿಸಿರುವ ಹತ್ಯೆಗಿಡಾದ ಪ್ರತಾಪಗಡ ಪೊಲೀಸ್ ಅಧಿಕಾರಿ...
ಲಖನೌ(ಡಿಯೊರಿಯಾ): ಉತ್ತರ ಪ್ರದೇಶ ಸರ್ಕಾರ ತಮಗೆ ನೀಡಿದ್ದ ಸರ್ಕಾರಿ ಹುದ್ದೆಯನ್ನು ನಿರಾಕರಿಸಿರುವ ಹತ್ಯೆಗಿಡಾದ ಪ್ರತಾಪಗಡ ಪೊಲೀಸ್ ಅಧಿಕಾರಿ ಝಿಯಾ-ಉಲ್-ಹಕ್ ಅವರ ಪತ್ನಿ ಪರ್ವೀನ್ ಅಜಾದ್ ಅವರು ತಮಗೆ ಡಿಎಸ್ಪಿ ಹುದ್ದೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈವರೆಗೆ ಮಾಧ್ಯಮಗಳಿಂದ ದೂರ ಉಳಿದಿದ್ದ ಪರ್ವೀನ್ ಇಂದು ಲೋಕತಾಂತ್ರಿಕ ಕಾಂಗ್ರೆಸ್ ನಾಯಕ ಹರಿಶಂಕ ತಿವಾರಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ವೇಳೆ, ಡಿಎಸ್ಪಿ ಬಿಟ್ಟು ಬೆರೆ ಯಾವುದೇ ಹುದ್ದೆಯನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪತಿಗೆ ನ್ಯಾಯ ಸಿಗುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ. ನನಗಾಗಿ ನಾನು ಹೋರಾಟ ಮಾಡುತ್ತಿಲ್ಲ. ಆದರೆ ಪೊಲೀಸ್ ಅಧಿಕಾರಿಗಳ ಮೇಲೆ ಯಾರೂ ಕೈ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು ಎಂದು ಪರ್ವೀನ್ ಹೇಳಿದರು.
ಹತ್ಯೆಗಿಡಾದ ಡಿಎಸ್ಪಿ ಝಿಯಾ-ಉಲ್-ಹಕ್ ಅವರ ಪತ್ನಿ ಪರ್ವೀನ್ ಅಜಾದ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಕಳೆದ ರಾತ್ರಿ ಪೊಲೀಸ್ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಅಧಿಕಾರಿ(ಒಎಸ್‌ಡಿ) ಹುದ್ದೆಗೆ ನೇಮಕ ಮಾಡಿತ್ತು. ಅಲ್ಲದೆ ಡಿಎಸ್ಪಿಯ ಸೋಹದರಿನಿಗೂ ಪೊಲೀಸ್ ಪೇದೆ ಹುದ್ದೆ ನೀಡಿತ್ತು. ಈ ಇಬ್ಬರ ನೇಮಕಾತಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಇಂದು ಕಳುಹಿಸಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮೃತ ಪೊಲೀಸ್ ಅಧಿಕಾರಿಗೆ ಮನೆಗೆ ಭೇಟಿ ನೀಡಿದ್ದ ವೇಳೆ, ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು.