ಕಾಪ್ಟರ್ ಹಗರಣ: ತ್ಯಾಗಿ ಸೇರಿ 11 ಜನರ ವಿರುದ್ಧ ಎಫ್‌ಐಆರ್
3600 ಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಹಾಗೂ...
ನವದೆಹಲಿ: 3600 ಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಹಾಗೂ ಕೇಂದ್ರ ಮಾಜಿ ಸಚಿವ ಸಂತೋಷ್ ಬಗ್ರೊಡಿಯಾ ಅವರ ಸಹೋದರ ಸತೀಶ್ ಬಗ್ರೊಡಿಯಾ ಸೇರಿದಂತೆ 11 ಜನರ ವಿರುದ್ಧ ಸಿಬಿಐ ಬುಧವಾರ ಎಫ್‌ಐಆರ್ ದಾಖಲಿಸಿದೆ.
ಈ 11 ಆರೋಪಿಗಳ ವಿರುದ್ಧ ವಂಚನೆ ಹಾಗೂ ಸಂಚು ಪ್ರಕರಣ ದಾಖಲಿಸಲಾಗಿದ್ದು, ಈ ಸಂಬಂಧ ಸಿಬಿಐ ಅಧಿಕಾರಿಗಳು ದೆಹಲಿ, ಎನ್‌ಸಿಆರ್ ಹಾಗೂ ಚಂಡೀಗಢ ಸೇರಿದಂತೆ 14 ಸ್ಥಳಗಲ್ಲಿ ಶೋಧ ನಡೆಸಿದ್ದಾರೆ.
ಕಾಪ್ಟರ್ ಹಗರಣ ಸಂಬಂಧಿಸಿದ ಕೆಲವು ಅಧಿಕೃತ ದಾಖಲೆಗಳನ್ನು ಇಟಲಿಯಿಂದ ಸ್ವೀಕರಿಸಿದ ಮಾರನೆ ದಿನವೇ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ತನಿಖೆಗೆ ಮತ್ತಷ್ಟು ವೇಗ ನೀಡುವ ಸಾಧ್ಯತೆ ಇದೆ.
ಇತ್ತೀಚಿಗಷ್ಟೇ ಪ್ರಕರಣ ಸಂಬಂಧ ತ್ಯಾಗಿ ಹಾಗೂ ಅವರ ಸಹೋದರರಾದ ಜೂಲಿ, ಡೋಸ್ಕಾ ತ್ಯಾಗಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಯುರೋಪ್‌ನ ಮಧ್ಯವರ್ತಿಗಳಾದ ಕಾರ್ಲೋ ಗೆರೋಸಾ ಮತ್ತು ಗಿಡೋ ಹಷ್ಕೆ ಜತೆಗಿನ ಸಂಬಂಧದ ಕುರಿತು ಸಿಬಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು.
ಲಂಚದ ಹಣವನ್ನು ವರ್ಗಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು ಎನ್ನಲಾದ ಭಾರತೀಯ ಕಂಪನಿಗಳಾದ ಏರೋಮ್ಯಾಟ್ರಿಕ್ಸ್, ಐಡಿಎಸ್ ಇನ್ಫೋಟೆಕ್ ಕಂಪನಿಗಳ ಅಧಿಕಾರಿಗಳ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.