ಕಾಶ್ಮೀರ: ಹಿಜ್ಬುಲ್ ಉಗ್ರರ ದಾಳಿ; ಐವರು ಯೋಧರ ಸಾವು
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ವರ್ಷಗಳ ಬಳಿಕ ಹಿಜ್ಬುಲ್ ಉಗ್ರರು ಮತ್ತೆ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ್ದು, ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಮತ್ತು...
ಶ್ರೀನಗರ: ಮೂರು ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ್ದು, ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಮತ್ತು 7 ಯೋಧರು ಗಾಯಗೊಂಡಿದ್ದಾರೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿರುವ ಪಬ್ಲಿಕ್ ಸ್ಕೂಲ್ ಬಳಿ ಅವಿತುಕೊಂಡಿದ್ದ ಉಗ್ರರು ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶಾಲಾ ಮಕ್ಕಳು ಆಟವಾಡುತ್ತಿದ್ದರು ಎನ್ನಲಾಗಿದೆ. ಆದರೆ ಮಕ್ಕಳು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಸಿಆರ್ಪಿಎಫ್ ಯೋಧರ ಹಾಗೂ ಉಗ್ರರ ಮಧ್ಯ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ ಎಂದು ರಕ್ಷಣಾ ಪಡೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಜ್ಯದ ಓರ್ವ ಯೋಧ ಸಾವು:
ಮೃತಪಟ್ಟ ಐವರು ಯೋಧರಲ್ಲಿ ಓರ್ವ ಯೋಧ ಕರ್ನಾಟಕದವರಾಗಿದ್ದು, ಮಂಡ್ಯ ಜಿಲ್ಲೆ. ಕೆ.ಆರ್.ಪೇಟೆ ತಾಲೂಕಿನ ಸತೀಶ್ ಎಂದು ಹೇಳಲಾಗಿದೆ.
ಉಗ್ರರ ದಾಳಿಗೆ ಬೇಹುಗಾರಿಕಾ ವೈಫಲ್ಯವೇ ಕಾರಣ ಎಂದು ನಿವೃತ್ತ ಮೇಜರ್ ಜನರಲ್ ಎಂ.ಸಿ.ನಂಜಪ್ಪ ಅವರು ಹೇಳಿದ್ದಾರೆ.
ದಾಳಿ ನಡೆದಿದ್ದು ಹೀಗೆ: ಕ್ರಿಕೆಟ್ ಆಡುವ ನೆಪದಲ್ಲಿ ಟ್ರ್ಯಾಕ್ಸೂಟ್ ಧರಿಸಿ, ಕ್ರಿಕೆಟ್ ಬ್ಯಾಗ್ನಲ್ಲೇ ಶಸ್ತಾಸ್ತ್ರ ತಂದಿದ್ದ ಉಗ್ರರು, ಅಲ್ಲಿದ್ದ ಸಿಆರ್ಪಿಎಫ್ ಯೋಧರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿ, ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ನಾವೇ ಹೊಣೆ: ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆ ಶ್ರೀನಗರದ ಹೃದಯ ಭಾಗದಲ್ಲಿ ಬುಧವಾರ ನಡೆದ ಉಗ್ರ ದಾಳಿಯ ಹೊಣೆ ಹೊತ್ತುಕೊಂಡಿದೆ.