ಲಂಕಾದಿಂದ 16 ತಮಿಳು ಮೀನುಗಾರರ ಬಿಡುಗಡೆ
ಟುಟಿಕೊರಿನ್ : ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತಮಿಳುನಾಡಿನ 16 ಮೀನುಗಾರರನ್ನು ಶ್ರೀಲಂಕಾ ಕೋರ್ಟ್ ಬಿಡುಗಡೆ ಮಾಡಿದೆ.
ನಾಗಪಟ್ಟಣಂನ ತರುವೈಕುಲಂ ಗ್ರಾಮದ ಮೀನುಗಾರರ ನಾಲ್ಕು ಬೋಟ್ಗಳನ್ನು ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಮಾರ್ಚ್ 3ರಂದು ಬಂಧಿಸಿದ್ದರು.
ಈ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾದ ಕುತಲಂ ಕೋರ್ಟ್ ಮಾರ್ಚ್ 11ರಂದು ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಲಂಕಾ ಸರ್ಕಾರ ಮೀನುಗಾರರನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಇಂದು ತಮ್ಮ ಬೋಟ್ಗಳೊಂದಿಗೆ ತಾಯಿನಾಡಿಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರ ಬಿಡುಗಡೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಎರಡು ಬಾರಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಮಧ್ಯ ಪ್ರವೇಶಿಸಿ ಎಂದು ಕೇಳಿಕೊಂಡಿದ್ದರು.