ಶ್ರೀನಗರದ ಉಗ್ರರ ದಾಳಿಯ ಹಿಂದೆ ಪಾಕ್ ಕೈವಾಡ: ಗೃಹ ಕಾರ್ಯದರ್ಶಿ
ಶ್ರೀನಗರದ ಹೃದಯ ಭಾಗದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ..
ನವದೆಹಲಿ: ಶ್ರೀನಗರದ ಹೃದಯ ಭಾಗದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಹೇಳಿರುವ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರು ಪ್ರಕರಣದ ಬಗ್ಗೆ ಬುಧವಾರ ತನಿಖೆಗೆ ಆದೇಶಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿರುವ ಸಿಂಗ್, ಭಾರತ-ಪಾಕ್ ಗಡಿಯಲ್ಲಿ ಈ ದಾಳಿ ನಡೆದಿದ್ದೆ. ಹೀಗಾಗಿ ಉಗ್ರರು ಪಾಕಿಸ್ತಾನದಿಂದ ನುಸುಳಿ ಬಂದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ನಮಗೆ ನಾಲ್ಕು ಉಗ್ರರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇತ್ತು. ಈಗ ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಇಬ್ಬರು ದಾಳಿಯ ನಂತರ ತಪ್ಪಿಸಿಕೊಂಡಿದ್ದು, ಎಲ್ಲ ಕಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿಂಗ್ ತಿಳಿಸಿದರು.
ಈ ನಾಲ್ವರು ಉಗ್ರರು ಪಾಕಿಸ್ತಾನದಿಂದ ಬಂದಿದ್ದು, ಇವರು ಎಲ್‌ಇಟಿ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದರು.
ಮೂರು ವರ್ಷಗಳ ಬಳಿಕ ಶ್ರೀನಗರದ ಬೆಮಿನಾ ಪ್ರದೇಶದ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಇಂದು ಬೆಳಗ್ಗೆ ಉಗ್ರರು ದಾಳಿ ಮಾಡಿದ್ದರು. ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಮತ್ತು 7 ಯೋಧರು ಗಾಯಗೊಂಡಿದ್ದಾರೆ.