ಯೋಗೇಶ್ವರ್ ಸೇರಿ 4 ಪಕ್ಷೇತರರಿಗೆ 'ಕೈ' ಟಿಕೆಟ್ ಖಚಿತ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ನಾಲ್ವರು ಪಕ್ಷೇತರ ಶಾಸಕರಿಗೆ ಟಿಕೆಟ್ ನೀಡಲು..
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ನಾಲ್ವರು ಪಕ್ಷೇತರ ಶಾಸಕರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಗುರುವಾರ ಗ್ರೀನ್ ಸಿಗ್ನಲ್ ನೀಡಿದೆ.
ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಯೋಗೇಶ್ವರ್, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಕನಗಿರಿ ಶಾಸಕ ಶಿವರಾಜ್ ತಂಗಡಗಿ, ಪಾವಗಡದ ವೆಂಕಟರಮಣಪ್ಪ ಹಾಗೂ ಹಿರಿಯೂರು ಶಾಸಕ ಡಿ.ಸುಧಾಕರ್ ಅವರಿಗೆ ಟಿಕೆಟ್ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಸುರಪುರ ಶಾಸಕ ರಾಜುಗೌಡ ಹಾಗೂ ಅನಂದ್ ಅಸ್ನೋಟಿಕರ್ ಅವರ ಸ್ಥಿತಿ ಇನ್ನು ಅತಂತ್ರವಾಗಿದೆ. ಈ ಇಬ್ಬರಿಗೆ ಟಿಕೆಟ್ ನೀಡುವ ಬಗ್ಗೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಮಾರ್ಚ್ 16 ಹಾಗೂ 17ರಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಯೋಗೇಶ್ವರ್ ಹಾಗೂ ಪಕ್ಷೇತರ ಶಾಸಕರ ಸೇರ್ಪಡೆ ದಿನ ನಿಗದಿಪಡಿಸುವ ಸಾಧ್ಯತೆ ಇದೆ.