ಶ್ರೀನಗರ ದಾಳಿ: ಸರ್ಕಾರಿ ನೌಕರನ ಬಂಧನ
ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಯ ಉಗ್ರರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಸರ್ಕಾರಿ ನೌಕರನ ಬಂಧನ.
ನವದೆಹಲಿ: ಶ್ರೀನಗರದ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿ ಮಾಡಿದ ಉಗ್ರರರಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ನೌಕರನನ್ನು ಶನಿವಾರ ಬಂಧಿಸಿಲಾಗಿದೆ.
ಬಾರಾಮುಲ್ಲಾದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿರುವ ಪ್ರದೀಪ್ ಸಿಂಗ್, ಬೆಮಿನಾ ಪ್ರದೇಶದಲ್ಲಿರುವ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ ಉಗ್ರರಿಗೆ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಶ್ರೀನಗರದ ಚಟ್ಟಾಬಾಲ್ನಲ್ಲಿ ಇನ್ನು ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರು ಪಾಕಿಸ್ತಾನದವರು ಎಂದು ಹೇಳಲಾಗಿದೆ.
ಈ ಉಗ್ರರ ಬಂಧನದ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ನೌಹಾಟ್, ಕನ್ಯಾರ್, ರೈನಾವರಿ, ಸಫಕ್ದಾಲ್, ಮಹಾರಾಜ್ಗುಂಜ್, ಮೈಸುಮ್, ಕರ್ಲ್ಕುಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಕಾಪಾಡುವ ಸಂಬಂಧ ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಸೇರಿದಂತೆ ಕ್ಷಿಪ್ರಪಡೆ ಕಾರ್ಯಚರಣೆ ನಿಯೋಜಿಸಲಾಗಿದ್ದು, ಈವರೆಗೆ ಯಾವುದೇ ಹಿಂಸಾಕೃತ್ಯಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಶ್ರೀನಗರದಲ್ಲಿ ಕರ್ಫ್ಯೂ ಸ್ಥಗಿತಗೊಳಿಸಲಾಗಿದ್ದು, ಉಗ್ರರ ದಾಳಿಯಲ್ಲಿ ಗಾಯಗೊಂಡ ತಮ್ಮ ಸಹೋದ್ಯೋಗಿಗಳಿಗೆ ಸಿಆರ್ಪಿಎಫ್ ಯೋಧರು ರಕ್ತದಾನ ಮಾಡುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.