ಮುಲಾಯಂಗೆ ಉಗ್ರರ ಸಂಪರ್ಕವಿದೆ: ಬೇನಿ ಪ್ರಸಾದ್
ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂಸತ್‌ನಲ್ಲಿ ಮಾತನಾಡಿದ ಬೇನಿ ಪ್ರಸಾದ್, 2002ರ ಗಲಭೆಗಳ ನಂತರ ಸಮಾಜವಾದಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಾ ಜೊತೆಯಾಗಿ ಗುಜರಾತ್ ಚುನಾವಣೆಯಲ್ಲಿ ಹೋರಾಡಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಂತೆ ಮಾಡಿವೆ ಎಂದು ಆರೋಪಿಸಿದರು.
ಅಲ್ಲದೇ ಮುಲಾಯಂ ಸಿಂಗ್ ಯಾದವ್ ಅವರಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದಾರೆ.
ಬೇನಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಸಂಸದರು ಈ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಬೇನಿ, ನನ್ನನ್ನು ವಜಾಗೊಳಿಸುವಂತೆ ಕೇಳಲು ಮುಲಾಯಂ ಯಾರು? ಅವರು ನನ್ನನ್ನು ಮಂತ್ರಿ ಮಾಡಿದ್ದಾರೆಯೇ? ರಾಷ್ಟ್ರದ್ರೋಹ ಮಾಡಿರುವ ಅವರು ಕ್ಷಮೆಯಾಚಿಸಬೇಕು ಎಂದರು.
ಭಯೋತ್ಪಾದನೆಗೆ ಯಾವುದೇ ಧರ್ಮ ಮತ್ತು ಬಣ್ಣವಿಲ್ಲ. ಬಾಬ್ರಿ ಮಸೀದ್ ಧ್ವಂಸ ಮತ್ತು ಗೋದ್ರಾ ಹತ್ಯಾಕಾಂಡ ಘಟನೆಗಳು ಕೂಡ ಭಯೋತ್ಪಾದನೆಗೆ ಸಂಬಂಧಪಟ್ಟಂತ್ತದ್ದು. ಇಂತಹ ಅಪರಾಧವೆಸಗಿರುವವರಿಗೆ ಮುಲಾಯಂ ಬೆಂಬಲಿಸಿ, ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ ಎಂದು ಆಪಾದಿಸಿದರು.