ಲೈಂಗಿಕ ಕಿರುಕುಳ: ಮಾಜಿ ಸಂಸದ ಬಂಧನ
ಲಕ್ನೋ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮಾಜಿ ಸಂಸದ ಚಂದ್ರನಾಥ್ ಸಿಂಗ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಚಂದ್ರನಾಥ್ ಸಿಂಗ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಚಂದ್ರನಾಥ್ ಸಿಂಗ್ ತಮ್ಮ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ದಾಖಲಿಸಿದ್ದರು.
ಚಂದ್ರನಾಥ್ಸಿಂಗ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಅವರನ್ನು ಬಂಧಿಸುವಾಗ ಅವರು ಅತಿಯಾಗಿ ಮದ್ಯಪಾನ ಮಾಡಿದ್ದರು ಎಂದು ಪೊಲೀಸ್ ಪೇದೆ ತಿಳಿಸಿದ್ದಾರೆ. ಚಂದ್ರನಾಥ್ಸಿಂಗ್ ಅವರ ಈ ನಡವಳಿಕೆಯ ಬಗ್ಗೆ ಹೇಳಿಕೆ ನೀಡಲು ಹಿಂಜರಿದ ಸಮಾಜವಾದಿ ಪಕ್ಷ, ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.