ಡಿಎಂಕೆ ಓಲೈಕೆಗೆ ಕೇಂದ್ರ ಕಸರತ್ತು
ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಡಿಎಂಕೆಯ ಮನವೊಲಿಕೆಗಾಗಿ ಕೇಂದ್ರ ಸರ್ಕಾರ...
ನವದೆಹಲಿ: ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಡಿಎಂಕೆಯ ಮನವೊಲಿಕೆಗಾಗಿ ಕೇಂದ್ರ ಸರ್ಕಾರ ಇದೀಗ ಲಂಕಾ ತಮಿಳರ ಸಮಸ್ಯೆ ಬಗ್ಗೆ ಗೊತ್ತುವಳಿ ಮಂಡನೆಗೆ ಸಿದ್ಧವಾಗಿದೆ.
ಯುಪಿಎ ಸರ್ಕಾರದಿಂದ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಹೇಳಿಕೆ ನೀಡಿದ ಕೂಡಲೇ ಕಾಂಗ್ರೆಸ್ ಕೋರ್ ಕಮಿಟಿ ಸಭೆ ಸೇರಿ, ಮುಂದಿನ ನಡೆ ಬಗ್ಗೆ ಚರ್ಚಿಸಿದೆ. ಅದೇ ವೇಳೆ ಈ ಸಭೆಯಲ್ಲಿ ಕಾಂಗ್ರೆಸ್ ಲಂಕಾ ತಮಿಳರ ಸಮಸ್ಯೆಯ ಬಗ್ಗೆ ಸಂಸತ್ನಲ್ಲಿ ಗೊತ್ತುವಳಿ ಮಂಡಿಸಲು ತೀರ್ಮಾನ ತೆಗೆದುಕೊಂಡಿದೆ.
ಮಂಗಳವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರುಣಾನಿಧಿ, ಮಾರ್ಚ್ 22ರಂದು ಜೆನಿವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ ಲಂಕಾ ವಿರುದ್ಧ ಕೇಂದ್ರ ಚಲಾಯಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಚ್ 21ರ ಮುನ್ನ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತೇವೆ ಎಂದು ಬೆದರಿಕೆಯನ್ನೊಡ್ಡಿದ್ದರು.
ಆದಾಗ್ಯೂ, ಡಿಎಂಕೆ ಬೆಂಬಲ ವಾಪಸ್ ಪಡೆದರೂ ಸರ್ಕಾರ ಭದ್ರವಾಗಿರುತ್ತದೆ ವಿತ್ತ ಸಚಿವ ಪಿ.ಚಿದಂಬರಂ ಹೇಳಿಕೆ ನೀಡಿದ್ದರು.
ಮಂಗಳವಾರ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೋರ್ ಕಮಿಟಿ ಸಭೆ ಸೇರಿದ್ದು, ಡಿಎಂಕೆಯ ಎರಡು ನಿರ್ಧಾರಗಳಿಗೆ ಸಭೆ ಸಮ್ಮತಿ ಸೂಚಿಸಿದೆ.