ಯುಪಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ ವಾಪಸ್
ಕೇಂದ್ರ ಸರ್ಕಾರದಿಂದ ಹೊರಬರಲು ಡಿಎಂಕೆ ನಿರ್ಧರಿಸಿದ್ದು, ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ತಮ್ಮ ಪಕ್ಷ ವಾಪಸ್ ಪಡೆಯುತ್ತಿದೆ..
ಚೆನ್ನೈ: ಕೇಂದ್ರ ಸರ್ಕಾರದಿಂದ ಹೊರಬರಲು ಡಿಎಂಕೆ ನಿರ್ಧರಿಸಿದ್ದು, ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ತಮ್ಮ ಪಕ್ಷ ವಾಪಸ್ ಪಡೆಯುತ್ತಿದೆ ಎಂದು ಮಂಗಳವಾರ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರು ಹೇಳಿದ್ದಾರೆ. ಹೀಗಾಗಿ ಈಗ ಕೇಂದ್ರ ಸರ್ಕಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಈ ಸಂಬಂಧ ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರುಣಾನಿಧಿ, ಯುಪಿಎ ಸರ್ಕಾರದಿಂದ ಹೊರಬರುವ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದರು. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಿಲ್ಲ ಎಂದು ಸಹ ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.
ಡಿಎಂಕೆಯ ನಾಲ್ವರು ರಾಜ್ಯ ಸಚಿವರು ಹಾಗೂ ಓರ್ವ ಕ್ಯಾಬಿನೆಟ್ ಸಚಿವರು ಇಂದು ಅಥವಾ ನಾಳೆ ಯುಪಿಎ ಸಂಪುಟಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಕರುಣಾ ತಿಳಿಸಿದರು. ಲೋಕಸಭೆಯಲ್ಲಿ ಡಿಎಂಕೆ ಒಟ್ಟು 18 ಸಂಸದರನ್ನು ಹೊಂದಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕರುಣಾನಿಧಿ, ತಮಿಳರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾ ವಿರುದ್ಧ ಮತ ಹಾಕಬೇಕು ಎಂದು ಆಗ್ರಹಿಸಿದ ಕರುಣಾನಿಧಿ, ನಾವು ಶ್ರೀಲಂಕಾ ತಮಿಳರ ಪರ ಹೋರಾಟವನ್ನು ಕೈಬಿಟ್ಟಿಲ್ಲ. ತಮಿಳರ ಹಕ್ಕಿಗಾಗಿ ನಿರಂತರವಾಗಿ ಹೋರಾಡುತ್ತೇವೆ ಎಂದರು.
ಡಿಎಂಕೆ ಈ ಕ್ರಮದಿಂದ ಒತ್ತಡಕ್ಕೆ ಸಿಲುಕಿರುವ ಕೇಂದ್ರ ಸರ್ಕಾರ ಶ್ರೀಲಂಕಾ ಜತೆಗೆ ಮಾ. 23ರಿಂದ ಆರಂಭವಾಗಬೇಕಿದ್ದ ರಕ್ಷಣಾ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯನ್ನು ರದ್ದುಮಾಡಿದೆ. ಈ ಮೂಲಕ ತಮಿಳರ ಹತ್ಯೆಗೆ ಸಂಬಂಧಿಸಿ ಶ್ರೀಲಂಕಾದ ವಿರುದ್ಧ ಕಠಿಣ ನಿಲವು ತಳೆಯುವ ಸೂಚನೆ ನೀಡಿದೆ.