ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಂಕಾ ತಮಿಳರ ವಿಷಯದ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ: ಕೇಂದ್ರ

ಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯ ವಿಷಯದಲ್ಲಿ ಡಿಎಂಕೆ ಅಸಮಾಧಾನ ನಿವಾರಿಸುವ ಸಲುವಾಗಿ ಸೋಮವಾರ ಕೇಂದ್ರ ...

Rashmi Kasaragodu
Updated On : 19 Mar 2013, 6:00 am

ನವದೆಹಲಿ: ಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯ ವಿಷಯದಲ್ಲಿ ಡಿಎಂಕೆ ಅಸಮಾಧಾನ ನಿವಾರಿಸುವ ಸಲುವಾಗಿ ಸೋಮವಾರ ಕೇಂದ್ರ ಸಚಿವತ್ರಯರು ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ನಡುವೆ ನಡೆದ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಡಿಎಂಕೆ ಕೇಂದ್ರ ಸರ್ಕಾರದಿಂದ ತಮ್ಮ ಬೆಂಬಲ ವಾಪಾಸ್ ಪಡೆಯಲು ನಿರ್ಧರಿಸಿದೆ.

ಮಂಗಳವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರುಣಾನಿಧಿ, ಮಾರ್ಚ್ 22ರಂದು ಜೆನಿವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ ಲಂಕಾ ವಿರುದ್ಧ ಕೇಂದ್ರ ಚಲಾಯಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಚ್ 21ರ ಮುನ್ನ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತೇವೆ ಎಂದು ಬೆದರಿಕೆಯನ್ನೊಡ್ಡಿದ್ದಾರೆ.

ಕರುಣಾನಿಧಿಯವರ ಹೇಳಿಕೆಯ ಹಿನ್ನೆಲೆಯಲ್ಲಿ ಇದೀಗ ಸಂಸದೀಯ ವ್ಯವಹಾರ ಸಚಿವ ಕಮಲ್‌ನಾಥ್ ಲಂಕಾ ತಮಿಳರ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಕೇಂದ್ರ ಸಿದ್ಧ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಯಾರ ಪರವಾಗಿ ಭಾರತ ಮತ ಚಲಾಯಿಸುತ್ತದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಂಗಳವಾರ ನಿರ್ಣಯ ಕೈಗೊಳ್ಳಲಿದೆ.

ಏತನ್ಮಧ್ಯೆ, ಶ್ರೀಲಂಕಾದಲ್ಲಿನ ಆಗುಹೋಗುಗಳ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಅಲ್ಲಿನ ತಮಿಳರ ಸಮಸ್ಯೆಯ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕಮಲ್‌ನಾಥ್ ಹೇಳಿದ್ದಾರೆ. ಅದೇ ವೇಳೆ ಚರ್ಚೆಗಾಗಿ ಸಮಯ ಹಾಗು ದಿನಾಂಕ ನಿಗದಿ ಪಡಿಸುವಂತೆ ಕಮಲ್‌ನಾಥ್ ಸ್ಪೀಕರ್ ಮೀರಾ ಕುಮಾರ್‌ಗೆ ಹೇಳಿದ್ದಾರೆ.

ಜೆನಿವಾದಲ್ಲಿ ಮಾರ್ಚ್ 22ರಂದು ನಡೆಯುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ, ಅಮೆರಿಕ ಮಂಡಿಸಲು ಉದ್ದೇಶಿಸಿರುವ ಗೊತ್ತುವಳಿಯೊಳಗೆ, ಶ್ರೀಲಂಕಾದ
ಯುದ್ಧಾಪರಾಧಿಗಳ ವಿರುದ್ಧ ಅಂತಾರಾಷ್ಟ್ರೀಯ  ತನಿಖೆ ಮತ್ತು ಕಾಲಮಿತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಅಂಶವನ್ನು ಸೇರಿಸಲು ಕೇಂದ್ರ ಮುಂದಾಗಬೇಕೆಂದು ಡಿಎಂಕೆ ಒತ್ತಾಯವಾಗಿದೆ.

ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದರೆ ತಾವು ಬೆಂಬಲ ವಾಪಾಸ್ ಪಡೆಯುವುದಾಗಿ ಡಿಎಂಕೆ ಪರವಾಗಿ ಮಾತನಾಡಿದ ಡಿಎಂಕೆ ಸದಸ್ಯ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಡಿಎಂಕೆಗೆ 18 ಸದಸ್ಯರಿದ್ದಾರೆ.

ಇದೀಗ ಡಿಎಂಕೆಯ ಮನವೊಲಿಕೆಗಾಗಿಯೇ ಕೇಂದ್ರ ಸರ್ಕಾರ ಪ್ರಸ್ತುತ ವಿಷಯದ ಬಗ್ಗೆ ಸಂಸತ್‌ನಲ್ಲಿ ಮುಕ್ತ ಚರ್ಚೆಗೆ ಸಿದ್ಧವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement