ಗಾಯಕ ರಾಜೇಶ್ ಕೃಷ್ಣನ್ ಮೂರನೆ ಮದುವೆಯಲ್ಲೂ ಬಿರುಕು!
ಖ್ಯಾತ ಹಿನ್ನೆಲೆ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರ ಮೂರನೇ ಮದುವೆ ಹದಿನೈದು ತಿಂಗಳಲ್ಲೇ ಮುರಿದು ಬಿದ್ದಿದೆ.
ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರ ಮೂರನೇ ಮದುವೆ ಹದಿನೈದು ತಿಂಗಳಲ್ಲೇ ಮುರಿದು ಬಿದ್ದಿದೆ. ರಾಜೇಶ್ ಕೃಷ್ಣನ್ ಅವರ ಮೂರನೇ ಪತ್ನಿ ರಮ್ಯಾ ವಸಿಷ್ಠ ಅವರು ವಿವಾಹ ರದ್ದತಿ ಕೋರಿ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೃಷ್ಣನ್ ಅವರಿಗೆ ಪುರುಷತ್ವ ಇಲ್ಲದ ಹಿನ್ನೆಲೆಯಲ್ಲಿ, ಸೆಕ್ಷನ್ 12(1)ಎ ಹಿಂದೂ ವಿವಾಹ ಕಾಯ್ದೆಯಡಿ ಅವರೊಂದಿಗಿನ ವಿವಾಹ ಮಾನ್ಯತೆಯನ್ನು ರದ್ದುಗೊಳಿಸುವಂತೆ ಕೋರಿ ಫೆಬ್ರುವರಿ 5ರಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ರಮ್ಯಾ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ಕೃಷ್ಣನ್ ಅವರಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದೆ.
ನವೆಂಬರ್ 7, 2011ರಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ರಮ್ಯಾ ಹಾಗೂ ರಾಜೇಶ್ ಕೃಷ್ಣನ್ ಅವರ ಮದುವೆ ನಡೆದಿತ್ತು. ನಂತರ ನವೆಂಬರ್ 11, 2011ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ನಡೆದಿತ್ತು. ರಮ್ಯಾ ಅವರಿಗೆ ಇದು ಮೊದಲನೆ ಮದುವೆ.
ವಿವಾಹ ರದ್ದತಿಗೆ ರಮ್ಯಾ ನೀಡಿದ ಕಾರಣಗಳು:
ರಾಜೇಶ್ ಕೃಷ್ಣನ್ ಅವರು 2009ರಿಂದಲೇ ನನಗೆ ಪರಿಚಿತರು. ನಾವು ಇಬ್ಬರು ಒಂದೇ ವೃತ್ತಿಯಲ್ಲಿದ್ದುದರಿಂದ ನಮ್ಮಿಬ್ಬರಿಗೂ ಪರಿಚಯ ಬೆಳೆದಿತ್ತು. ಆದರೆ ಕೆಲವು ಭಿನ್ನಾಪ್ರಾಯಗಳಿಂದಾಗಿ ಇಬ್ಬರು ಸುಮಾರು ಒಂದೂವರೆ ವರ್ಷಗಳ ಕಾಲ ಸಂಪರ್ಕದಲ್ಲಿರಲಿಲ್ಲ. ನಂತರ ಮತ್ತೆ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಬೆಳೆದು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆವು. ಅದರಂತೆ ನವೆಂಬರ್ 7, 2011ರಲ್ಲಿ ಮದುವೆಯಾದೆವು.
ಮದುವೆಯಾದ ಮೊದಲನೇ ತಿಂಗಳಲ್ಲೇ ಅವರಿಗೆ ನರ ದೌರ್ಬಲ್ಯ ಇರುವ ಸಮಸ್ಯೆ ನನಗೆ ಗೊತ್ತಾಯಿತು. ಅವರ ವೀರ್ಯಾಣುವಿನಲ್ಲಿ ಶೇ.2ಕ್ಕಿಂತ ಕಡಿಮೆ ಸತ್ವವಿದೆ ಎಂಬುದು ದೇಸಾಯಿ ನರ್ಸಿಂಗ್ ಹೋಮ್ನಲ್ಲಿ ನಡೆದ ತಪಾಸಣೆಯಲ್ಲಿ ಸಮಸ್ಯೆ ಗೊತ್ತಾಗಿತ್ತು ಎಂದು ರಮ್ಯಾ ಹೇಳಿದ್ದಾರೆ.
ಲೈಂಗಿಕವಾಗಿ ಕೃಷ್ಣನ್ ಅವರು ಅಸಮರ್ಥರಾಗಿದ್ದು, ಅವರು ಯಾವ ಮಹಿಳೆಯೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಲಾರರು. ಒಟ್ಟಾರೆ ಅವರಿಗೆ ಪುರುಷತ್ವವೇ ಇಲ್ಲ. ಈ ಬಗ್ಗೆ ನನಗೆ ಪರಿಚಯದ ತಜ್ಞ ವೈದ್ಯರಲ್ಲಿ ವಿಚಾರಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಹರಸಾಹಸ ಪಟ್ಟೆ, ಆದರೆ ಅದು ಯಾವುದು ಪ್ರಯೋಜನವಾಗಲಿಲ್ಲ ಎಂದು ತಮ್ಮ ಅರ್ಜಿಯಲ್ಲಿ ರಮ್ಯಾ ಹೇಳಿಕೊಂಡಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ನಾನು ಕೃಷ್ಣನ್ ಅವರೊಂದಿಗೆ ಒಂದು ಬಾರಿಯೂ ಲೈಂಗಿಕ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ನಡುವಿನ ಸಂಬಂಧ ಮದುವೆ ಅನಿಸಿಕೊಳ್ಳುವುದಿಲ್ಲವಾದ್ದರಿಂದ ನಮ್ಮ ವಿವಾಹವನ್ನು ರದ್ದುಗೊಳಿಸಬೇಕು ಎಂದು ರಮ್ಯಾ ಮನವಿ ಮಾಡಿದ್ದಾರೆ.
ಕಷ್ಣನ್ ಅವರು ಈ ಮುಂಚೆ ಎರಡು ಮದುವೆಯಾಗಿದ್ದರು. ಇಬ್ಬರು ಪತ್ನಿಯರಿಂದಲೂ ಅವರಿಗೆ ಮಕ್ಕಳಾಗಿರಲಿಲ್ಲ. ಮೊದಲಿನ ಎರಡು ಮದುವೆ ಮುರಿದು ಬಿದ್ದ ಕಾರಣ ಕೇಳಲಾಗಿ, ಮೊದಲ ಪತ್ನಿ ದೈಹಿಕವಾಗಿ ಅಶಕ್ತಳಾಗಿದ್ದಳೆಂದೂ, ಎರಡನೇ ಪತ್ನಿ ನನಗಿಂತ 12 ವರ್ಷ ಚಿಕ್ಕವಳಾಗಿದ್ದರಿಂದ ಅವಳ ಬಗ್ಗೆ ನನಗೆ ಮಗಳ ಭಾವನೆ ಬರುತ್ತಿತ್ತು ಎಂದಿದ್ದರು.
ಕೃಷ್ಣನ್ ಅವರು ತಮ್ಮ ದೌರ್ಬಲ್ಯ ಮುಚ್ಚಿಡಲು ಬೇರೆ ಬೇರೆ ಹುಡಿಗೀಯರನ್ನು ಮದುವೆಯಾಗುತ್ತಿದ್ದಾರೆ ಎಂದು ರಮ್ಯಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕೃಷ್ಣನ್ ಅವರು ತಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ಮಗು ಬಯಸಿದ್ದರು. ಈ ಸಂಬಂಧ ವೈದ್ಯರನ್ನು ಭೇಟಿ ಮಾಡಿದಾಗ ಅವರು ಕೃತಕ ಗರ್ಭಧಾರಣೆಗೆ ಸೂಚಿಸಿದ್ದರು. ವೈದ್ಯರ ಸೂಚನೆಗೆ ಕೃಷ್ಣನ್ ಒಪ್ಪಿಗೆ ಸೂಚಿಸಿದ್ದರು. ಆದರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
ಎರಡು ವಿಚ್ಛೇದನಗಳ ನಂತರವೂ ಅವರಿಗೆ ಒಬ್ಬ ನಟಿಯೊಂದಿಗೆ ಲಿವಿಂಗ್ ಇನ್ ಸಂಬಂಧ ಇತ್ತು ಎಂದು ರಮ್ಯಾ ದೂರಿದ್ದಾರೆ.