ಮುಲಾಯಂ ಸಿಂಗ್ ವಿರುದ್ಧ ಹೇಳಿಕೆಗೆ ಖೇದ ವ್ಯಕ್ತಪಡಿಸಿದ ಬೇನಿ
ಮುಲಾಯಂ ಸಿಂಗ್ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಉಕ್ಕು ಸಚಿವ ಬೇನಿ ಪ್ರಸಾದ್ ತಮ್ಮ ಹೇಳಿಕೆಗೆ ಖೇದ ವ್ಯಕ್ತ ಪಡಿಸಿದ್ದಾರೆ...
ನವದೆಹಲಿ: ಮುಲಾಯಂ ಸಿಂಗ್ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಉಕ್ಕು ಸಚಿವ ಬೇನಿ ಪ್ರಸಾದ್ ತಮ್ಮ ಹೇಳಿಕೆಗೆ ಖೇದ ವ್ಯಕ್ತ ಪಡಿಸಿದ್ದಾರೆ.
ಬೇನಿ ಅವರು ಕ್ಷಮೆಯಾಚನೆ ಮಾಡಬೇಕೆಂದು ಸಮಾಜವಾದಿ ಪಕ್ಷ ಹಾಗು ಕಾಂಗ್ರೆಸ್ ಒತ್ತಾಯ ಹೇರಿರುವುದೇ ಇದಕ್ಕೆ ಕಾರಣವಾಗಿದೆ.
ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಬೇನಿ, ತಮ್ಮಲ್ಲಿ ಯಾರೂ ರಾಜೀನಾಮೆ ನೀಡುವಂತೆ ಒತ್ತಾಯ ಹೇರಿಲ್ಲ ಎಂದು ಹೇಳಿದ್ದಾರೆ.
ಬೇನಿಯವರಿಗೆ ಪ್ರಧಾನಿ ಭೇಟಿಗೆ ಕರೆ ನೀಡಿದಾಗ, ಇನ್ನೇನು ಪ್ರಧಾನಿಯವರು ಬೇನಿಯವರ ರಾಜೀನಾಮೆ ಕೇಳಲಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು.
ಪ್ರಧಾನಿ ಜತೆ ಮಾತುಕತೆ ನಡೆಸಿದ ನಂತರ ಬೇನಿ, ತಾನು ಮುಲಾಯಂ ಸಿಂಗ್ ಅವರ ಬಗ್ಗೆ ಹೇಳಿದ ಹೇಳಿಕೆಗೆ ಖೇದ ವ್ಯಕ್ತ ಪಡಿಸುತ್ತೇನೆ ಹಾಗು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ನಾನದಕ್ಕೆ ಖೇದ ವ್ಯಕ್ತ ಪಡಿಸುತ್ತೇನೆ ಎಂದು ಪತ್ರಕರ್ತರಲ್ಲಿ ಮಾತನಾಡಿದ ಬೇನಿ ಹೇಳಿದ್ದಾರೆ.