ಯುಪಿಎಗೆ ಬೆಂಬಲ ಮುಂದುವರಿಕೆ: ಅಖಿಲೇಶ್
ಲಕ್ನೋ: ಸಮಾಜವಾದಿ ಪಕ್ಷ, ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರೆಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದಾರೆ.
ಡಿಎಂಕೆ ಯುಪಿಎಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ, ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಿಲ್ಲ ಎಂದು ಹೇಳಿರುವ ಅವರು, ಈ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಮುಲಾಯಂ ಸಿಂಗ್ ಯಾದವ್ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ನೇತಾಜಿ(ಮುಲಾಯಂ) ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮ ಪಕ್ಷದ ನಾಯಕತ್ವ ದೆಹಲಿಯಲ್ಲಿರುವುದರಿಂದ ಸಂಸತ್ನಲ್ಲಿ ನೇತಾಜಿ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ ಎಂದು ಅವರು ಸ್ಫಷ್ಟಪಡಿಸಿದ್ದಾರೆ.
ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆದರೆ ದೇಶದಲ್ಲಿ ಕೋಮು ಶಕ್ತಿಗಳು ಬೆಳೆಯುವ ಸಾಧ್ಯತೆಗಳಿರುವುದರಿಂದ ಬೆಂಬಲ ಹಿಂತೆಗುದುಕೊಳ್ಳುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ಈಗಾಗಲೇ ರಾಜ್ಯದ ಚುನಾವಣೆಯಲ್ಲಿ ಗೆದ್ದು, ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದೇವೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಅಖಿಲೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.