1993ರ ಮುಂಬೈ ಸರಣಿ ಸ್ಫೋಟ: ಯಾಕೂಬ್ ಮೆಮನ್ ಗೆ ಗಲ್ಲು ಖಾಯಂ
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಯಾಕೂಬ್ ಮೆಮನ್ ಗೆ ಸುಪ್ರೀಂ ಕೋರ್ಟ್ ಗುರುವಾರ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.
ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಯಾಕೂಬ್ ಮೆಮನ್ ಗೆ ಸುಪ್ರೀಂ ಕೋರ್ಟ್ ಗುರುವಾರ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.
ಮೆಮನ್ಗೆ ಗಲ್ಲು ವಿಧಿಸಿ ತೀರ್ಪು ನೀಡಿದ್ದ ಟಾಟಾ ಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದ್ದು, ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಹತ್ತು ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿದೆ. ಅಲ್ಲದೆ ಇನ್ನು 17 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಸಹ ಸುಪ್ರೀಂ ಕೋರ್ಟ್ ಖಾಯಂಗೊಳಿಸಿದೆ.
ಸ್ಫೋಟ ರೂವಾರಿ ಯಾಕೂಬ್ ಮೆಮನ್ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಆತನ ಪಾತ್ರದ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಸರಣಿ ಸ್ಫೋಟದಲ್ಲಿ ಪಾಕಿಸ್ತಾನದ ಪಾತ್ರ ದೃಢಪಟ್ಟಿದೆ ಮತ್ತು ಭಯೋತ್ಪಾಕರಿಗೆ ಪಾಕ್‌ನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದೆ.
ಉಗ್ರರ ತಪ್ಪೊಪ್ಪಿಗೆಯಿಂದ ಪಾಕ್‌ನ ಐಎಸ್‌ಐ ಪಾತ್ರ ಸಾಬೀತಾಗಿದೆ. ಭಯೋತ್ಪಾದನೆಗೆ ಐಎಸ್‌ಐ ಉತ್ತೇಜನ ನೀಡಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪೊಲೀಸ್, ಕಸ್ಟಮ್ಸ್ ಹಾಗೂ ಕರಾವಳಿ ಪಡೆಯ ನಿರ್ಲಕ್ಷ್ಯವೇ ಸ್ಫೋಟಕ್ಕೆ ಕಾರಣ ಎಂದಿದೆ.
1993ರ ಮಾರ್ಚ್ನಲ್ಲಿ ಮುಂಬೈನ 13 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿತ್ತು, ಈ ಸರಣಿ ಸ್ಫೋಟಗಳಲ್ಲಿ 257 ಜನ ಮೃತಪಟ್ಟಿದ್ದರು ಮತ್ತು 713 ಜನ ಗಾಯಗೊಂಡಿದ್ದರು.