ಎಂ.ಕೆ.ಸ್ಟಾಲಿನ್ ಮನೆ ಮೇಲೆ ಸಿಬಿಐ ದಾಳಿ
ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಗುರುವಾರ ದಾಳಿ ಮಾಡಿದೆ..
ಚೆನ್ನೈ: ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಗುರುವಾರ ದಾಳಿ ಮಾಡಿದೆ.
ಶ್ರೀಲಂಕಾ ತಮಿಳರ ಹತ್ಯೆ ವಿವಾದ ಸಂಬಂಧ ಡಿಎಂಕೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಎರಡೇ ದಿನಗಳಲ್ಲಿ ಈ ದಾಳಿ ನಡೆದದ್ದು ಅಚ್ಚರಿ ಮೂಡಿಸಿದೆ.
ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದೆ. ಆದರೆ ಸಿಬಿಐ ಅಧಿಕಾರಿಗಳು ಮಾತ್ರ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ವಿದೇಶದಿಂದ ಕಾರು ಆಮದು ಮಾಡಿಕೊಂಡ ವೇಳೆ ತೆರಿಗೆ ವಂಚಿಸಿದ ಆರೋಪದ ಮೇಲೆ ಸ್ಟಾಲಿನ್ ವಿರುದ್ಧ ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಇಂದು ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೇ ಪ್ರಕರಣ ಸಂಬಂಧ ಸ್ಟಾಲಿನ್ ಅವರ ಸ್ನೇಹಿತ ರಾಜಾ ಶಂಕರ್ ಅವರ ನಿವಾಸದ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಇನ್ನು ಸಿಬಿಐ ದಾಳಿಯ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ಇದೊಂದು ರಾಜಕೀಯ ಸೇಡು ಎಂದಿದ್ದಾರೆ. ಅಲ್ಲದೆ ಕಾನೂನಾತ್ಮಕವಾಗಿ ಎಲ್ಲ ಪ್ರಕರಣವನ್ನು ಎದುರಿಸುವುದಾಗಿ ತಿಳಿಸಿದ್ದಾರೆ.