ವಿಶ್ವಸಂಸ್ಥೆಯಲ್ಲಿ ಲಂಕಾ ವಿರುದ್ಧದ ನಿರ್ಣಯ ಅಂಗೀಕಾರ
ಶ್ರೀಲಂಕಾದಲ್ಲಿನ ತಮಿಳರ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ..
ಜಿನೆವಾ: ಶ್ರೀಲಂಕಾದಲ್ಲಿನ ತಮಿಳರ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ(ಯುಎನ್ಎಚ್ಆರ್ಸಿ) ಅಧಿವೇಶನದಲ್ಲಿ ಗುರುವಾರ ನಿರ್ಣಯ ಅಂಗೀಕರಿಸಲಾಗಿದೆ.
ಇಂದು ವಿಶ್ವಸಂಸ್ಥೆಯಲ್ಲಿ ಅಮೆರಿಕ ಮಂಡಿಸಿದ ಶ್ರೀಲಂಕಾದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಕುರಿತ ಕರಡು ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಭಾರತ ಸೇರಿ ನಿರ್ಣಯದ ಪರ 25 ದೇಶಗಳು ಮತ ಚಲಾಯಿಸಿದರೆ, ವಿರುದ್ಧವಾಗಿ 13ದೇಶಗಳು ಮತ ಚಲಾವಣೆ ಮಾಡಿದವು. ಇನ್ನು 8 ದೇಶಗಳು ಮತ ಚಲಾಯಿಸದೆ ತಟಸ್ಥವಾಗಿ ಉಳಿದವು. ಅಧಿವೇಶನದಲ್ಲಿ ಭಾರತ ಸೇರಿದಂತೆ ಒಟ್ಟು 46 ದೇಶಗಳು ಭಾಗವಹಿಸಿದ್ದವು.
ಈ ವೇಳೆ, ತಮಿಳರ ಕಾಳಜಿಯ ವಿಚಾರಗಳ ಬಗ್ಗೆ ಶ್ರೀಲಂಕಾ ಗಮನ ಹರಿಸಬೇಕು ಮತ್ತು ಅರ್ಥಪೂರ್ಣ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಪ್ರತಿಪಾದಿಸಿತು.
ಶ್ರೀಲಂಕಾದಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಸುಮ್ಮನಿಲ್ಲ, ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತ ಭಾಗಿಯಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ದಿಲೀಪ್ ಸಿನ್ಹಾ ಅವರು ಹೇಳಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕ್ಕೂ ಭಾರತ ಆಗ್ರಹಿಸಿದೆ. ಅಲ್ಲದೆ ಮೇಲಿನ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ಅಂತರಾಷ್ಟ್ರೀಯ ಮಟ್ಟದ ತನಿಖೆಗೆ ಭಾರತ ಒತ್ತಾಯಿಸಿತು.
ಇನ್ನು ಅಮೆರಿಕ ಮಂಡಿಸಿದ ನಿರ್ಣಯದ ಬಗ್ಗೆ ಶ್ರೀಲಂಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕ ನಿರ್ಣಯ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದಿದೆ. ಅಲ್ಲದೆ ನಮ್ಮ ವಿರುದ್ಧ ನಿಮಗೆ ಪೂರ್ವಗ್ರಹವೇಕೆ ಎಂದು ಪ್ರಶ್ನಿಸಿದೆ. ಇನ್ನು ಪಾಕಿಸ್ತಾನ ಶ್ರೀಲಂಕಾ ಬೆಂಬಲಕ್ಕೆ ನಿಂತಿದ್ದು, ಲಂಕಾ ಪರ ಮತದಾನ ಮಾಡಿದೆ.