ಜನಸಂಖ್ಯಾ ಹೆಚ್ಚಳವೇ ಅತ್ಯಾಚಾರ ಪ್ರಕರಣ ಹೆಚ್ಚಲು ಕಾರಣ: ಮಮತಾ
ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಲು ಜನಸಂಖ್ಯಾ ಹೆಚ್ಚಳವೇ ಕಾರಣ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ...
ಕೊಲ್ಕತ್ತಾ: ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಲು ಜನಸಂಖ್ಯಾ ಹೆಚ್ಚಳವೇ ಕಾರಣ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
2012 ನವೆಂಬರ್ ವರೆಗೆ ಕೊಲ್ಕತ್ತಾದಲ್ಲಿ 45 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೆ, ದೆಹಲಿಯಲ್ಲಿ 621 ಪ್ರಕರಣಗಳು ವರದಿಯಾಗಿವೆ ಎಂದು ಮಮತಾ ಹೇಳಿದ್ದಾರೆ.
ಜನಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಬಂಗಾಳದಲ್ಲಿ ಬಿದಾನ್ ಚಂದ್ರ ರಾಯ್ ಕಾಲಾವಧಿಯಲ್ಲಿದ್ದಷ್ಟೇ ಜನಸಂಖ್ಯೆ ಈಗಿಲ್ಲವಲ್ಲಾ? ನೀವು ಕಾನೂನಿನ ಬಗ್ಗೆ ಹಲವಾರು ಪ್ರಶ್ನೆಗಳನ್ನೆತ್ತಿದ್ದೀರಿ, ಅದೇ ವೇಳೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನೀವೇ ಹೇಳುತ್ತಿದ್ದೀರಿ ಎಂದು ವಿಧಾನಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ ಹೇಳಿದ್ದಾರೆ.
ಜನಸಂಖ್ಯೆ ಹೆಚ್ಚುತ್ತಿದೆ, ಕಾರುಗಳ ಸಂಖ್ಯೆ ಹೆಚ್ಚುತ್ತಿದೆ, ಮೂಲಸೌಕರ್ಯಗಳು ಹೆಚ್ಚುತ್ತಿವೆ, ಶಾಪಿಂಗ್ ಮಾಲ್‌ಗಳು ಹೆಚ್ಚುತ್ತಿವೆ, ಮಲ್ಟಿಪ್ಲೆಕ್ಸ್‌ಗಳು ತಲೆಯೆತ್ತುತ್ತಿವೆ. ನೀವು ಇವುಗಳನ್ನೆಲ್ಲಾ ಸ್ವಾಗತಿಸುತ್ತಿಲ್ಲವೇ?ಎಂದು ಗವರ್ನರ್ ಭಾಷಣದ ಬಗ್ಗೆ ನಡೆದ ಚರ್ಚೆಯಲ್ಲಿ ಮಮತಾ ತಮ್ಮ ವಾದ ಮಂಡಿಸಿದ್ದಾರೆ.
ಅದೇ ವೇಳೆ ಮಾಧ್ಯಮಗಳು ಅತ್ಯಾಚಾರ ಪ್ರಕರಣಗಳು ಉತ್ಪ್ರೇಕ್ಷೆಗೊಳಪಡಿಸುತ್ತಿವೆ ಎಂದು ಹೇಳಿದ ಮಮತಾ ಈ ಮೊದಲು ಮಹಿಳೆಯರು ಇಂಥಾ ಪ್ರಕರಣಗಳನ್ನು ಬೆಳಕಿಗೆ ತರಲು ನಾಚುತ್ತಿದ್ದರು ಎಂದಿದ್ದಾರೆ.
ಇದೀಗ ಸಾಮಾಜಿಕ ಪ್ರಜ್ಞೆ ಜಾಸ್ತಿಯಾಗಿದೆ. ಮಹಿಳೆಯರು ಈ ಬಗ್ಗೆ ದನಿಯೆತ್ತಿರುವುದು ಒಳ್ಳೆಯ ಸಂಗತಿ ಎಂದು ಮಮತಾ ನುಡಿದಿದ್ದಾರೆ.