ಭಾರತದ ಕಾನೂನು ವ್ಯವಸ್ಥೆಗೆ ಗೌರವ ಸಿಕ್ಕಿದೆ: ಪ್ರಧಾನಿ
ಭಾರತೀಯ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರನ್ನು ವಾಪಸ್ ಕಳಿಸಲು ಒಪ್ಪಿರುವ ಇಟೆಲಿ ಸರ್ಕಾರದ ತೀರ್ಮಾನವನ್ನು...
ನವದೆಹಲಿ: ಭಾರತೀಯ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರನ್ನು ವಾಪಸ್ ಕಳಿಸಲು ಒಪ್ಪಿರುವ ಇಟಲಿ ಸರ್ಕಾರದ ತೀರ್ಮಾನವನ್ನು ಪ್ರಧಾನಿ ಮನಮೋಹನ್ ಸಿಂಗ್ ಸ್ವಾಗತಿಸಿದ್ದಾರೆ.
ಇಟಲಿಯ ಈ ನಿರ್ಧಾರದಿಂದಾಗಿ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಗೌರವ ಸಿಕ್ಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ದೇಶದ ಕಾನೂನು ವ್ಯವಸ್ಥೆಯನ್ನು ಇಟಲಿ ಗೌರವಿಸಿದ್ದಕ್ಕೆ ನಾನು ಸಂತೋಷ ಪಡುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿ ತಿಂಗಳಾಂತ್ಯದಲ್ಲಿ ಕೇರಳದ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಇಟೆಲಿಯ ನಾವಿಕರು ಗುಂಡಿಕ್ಕಿ ಹತ್ಯೆಗೈದಿದ್ದರು.
ಈ ಆರೋಪಿಗಳನ್ನು ಭಾರತ ಸರ್ಕಾರ ಬಂಧಿಸಿದ್ದರೂ, ತದ ನಂತರ ಜಾಮೀನು ನೀಡಿ ತಾಯ್ನಾಡಿಗೆ ಮರಳಲು ಅನುಮತಿ ನೀಡಿತ್ತು.
ತಾಯ್ನಾಡಿಗೆ ಮರಳಿದ ನಾವಿಕರು ನಿಗದಿತ ಸಮಯದಲ್ಲಿ ಭಾರತಕ್ಕೆ ವಾಪಸ್ ಆಗದೇ ಇದ್ದಾಗ, ಅವರನ್ನು ವಾಪಸ್ ಕಳಿಸುವಂತೆ ಭಾರತ ಮನವಿ ಮಾಡಿತ್ತು. ಭಾರತದ ಮನವಿಗೆ ಕಿವಿಗೊಡದ ಇಟಲಿ ನಾವಿಕರನ್ನು ವಾಪಸ್ ಕಳುಹಿಸುವುದಿಲ್ಲವೆಂದು ಉಡಾಫೆ ಉತ್ತರ ನೀಡಿತ್ತು.
ಏತನ್ಮಧ್ಯೆ, ಇಟಲಿ ಸರ್ಕಾರಕ್ಕೆ ಭಾರತ ಎಚ್ಚರಿಕೆ ನೀಡಿದ್ದು ಇದಕ್ಕೆ ಮಣಿದ ಇಟಲಿ ಸರ್ಕಾರ ಇದೀಗ ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸಲು ಒಪ್ಪಿಕೊಂಡಿದೆ.